ಅನುದಾನರಹಿತ ಶಿಕ್ಷಕರ ಅಹೋರಾತ್ರಿ ಧರಣಿ ಅಂತ್ಯ | Unaided teachers
ಜಿಲ್ಲಾಧಿಕಾರಿ ಕಚೇರಿ ಎದುರು ಅಸ್ವಸ್ಥಗೊಂಡ ಶಿಕ್ಷಕಿಯನ್ನು ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಪದಾಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದರು. ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತುತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಲ್ಲಾಧಿಕಾರಿ ಮನವಿ ಮೇರೆಗೆ ಮುಷ್ಕರ 2ನೇ ದಿನಕ್ಕೆ ಮುಕ್ತಾಯ
ಮೂವರು ಮಹಿಳೆಯರು ಅಸ್ವಸ್ಥ, ಮೆಗ್ಗಾನ್ ಆಸ್ಪತ್ರೆಗೆ ದಾಖಲು
ವೇತನ ಭಾಗ್ಯ ಕಲ್ಪಿಸುವಂತೆ ಮೂವತ್ತು ವರ್ಷದ ಬೇಡಿಕೆ
ಶಿವಮೊಗ್ಗ: ಕಳೆದ ಮೂವತ್ತು ವರ್ಷದ ಏಕೈಕ ಬೇಡಿಕೆಯಾದ ವೇತನ(Salary) ಭಾಗ್ಯವನ್ನು ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಪದಾಧಿಕಾರಿಗಳು ಬುಧವಾರ ಅಹೋರಾತ್ರಿ ಧರಣಿ ನಡೆಸಿದರು. ಈ ವೇಳೆ ಮೂವರು ಶಿಕ್ಷಕಿಯರು(Teachers)ಅಸ್ವಸ್ಥಗೊಂಡಿದ್ದು, ಅಂತಿಮವಾಗಿ ಜಿಲ್ಲಾಧಿಕಾರಿ ಮನವಿ ಮೇರೆಗೆ ಪ್ರತಿಭಟನಾಕಾರರು ಮುಷ್ಕರವನ್ನು ಎರಡನೇ ದಿನಕ್ಕೆ ಮುಕ್ತಾಯಗೊಳಿಸಿದರು.
ರಾಜ್ಯದಲ್ಲಿ 1995ರ ನಂತರ ಆರಂಭಗೊಂಡ ಅನುದಾನರಹಿತ ಶಾಲಾ-ಕಾಲೇಜುಗಳಿಗೆ ಎಲ್ಲ ಭಾಗ್ಯಗಳ ಜತೆ ವೇತನ ಭಾಗ್ಯ ನೀಡುವಂತೆ ಆಗ್ರಹಿಸಿ ಬುಧವಾರ ಬೆಳಗ್ಗೆಯಿಂದ ಜಿಲ್ಲಾಧಿಕಾರಿ (District Collector)ಕಚೇರಿ ಎದುರು ವಿವಿಧ ಜಿಲ್ಲೆಗಳ ಅನುದಾನರಹಿತ ಶಾಲಾ-ಕಾಲೇಜುಗಳು ಶಿಕ್ಷಕರು ಅಹೋರಾತ್ರಿ ಧರಣಿ ನಡೆಸಿದ್ದರು. ಬುಧವಾರ ರಾತ್ರಿಯೇ ಇಬ್ಬರು ಮತ್ತು ಗುರುವಾರ ಬೆಳಗ್ಗೆ ಮತ್ತೊಬ್ಬ ಶಿಕ್ಷಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದರು.
ಜಿಲ್ಲಾಧಿಕಾರಿ ಕಚೇರಿ ಎದುರು ಅಸ್ವಸ್ಥಗೊಂಡ ಶಿಕ್ಷಕಿಯನ್ನು ಸ್ಟ್ರೇಚ್ಚರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಪಾಯ ಅರಿತ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಶಿಕ್ಷಕರ ಮನವೊಲಿಸಿ ಮುಷ್ಕರ ಕೈಬಿಡುವಂತೆ ಮಾಡಿತು. ಒಕ್ಕೂಟದ ಅಧ್ಯಕ್ಷ ಜಿ.ಸಿ.ಶಿವಪ್ಪ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನುದಾನರಹಿತ ಶಾಲೆಗಳ ಶಿಕ್ಷಕರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗದಗ ಜಿಲ್ಲೆಯ ಇಬ್ಬರು ಮತ್ತು ಬೆಳಗಾವಿ ಜಿಲ್ಲೆಯ ಒಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು. ಗದಗ ಜಿಲ್ಲೆಯ ಶಿಕ್ಷಕರು ಚೇತರಿಸಿಕೊಂಡು ಮುಷ್ಕರಕ್ಕೆ ಮರಳಿದರೆ, ಗುರುವಾರ ಅಸ್ವಸ್ಥಗೊಂಡಿದ್ದ ಬೆಳೆಗಾವಿ ಜಿಲ್ಲೆಯ ಶಿಕ್ಷಕಿಗೆ ಚಿಕಿತ್ಸೆ ಮುಂದುವರಿದಿತ್ತು.
ಶಿಕ್ಷಕರ ಮುಷ್ಕರ ಕಾವೇರುತ್ತಿದ್ದಂತೆ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಕಳೆದ 30 ವರ್ಷಗಳಿಂದ ಒಕ್ಕೂಟ ಏಕೈಕ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ, ಜನಪ್ರತಿನಿಧಿಗಳಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಈ ವೇಳೆ ಪ್ರತಿಕ್ರಿಯೆ ನೀಡಿದ ಶಾಸಕ ಚನ್ನಬಸಪ್ಪ ಮತ್ತು ಧನಂಜಯ ಸರ್ಜಿ ಸಮಸ್ಯೆಯನ್ನು ಸರ್ಕಾರ ಗಮನಕ್ಕೆ ತರಲಾಗುವುದು. ಮುಂಬರುವ ಚಳಿಗಾಲದ ಅಧಿವೇಶನದಲ್ಲೂ ಪ್ರಸ್ತಾಪ ಮಾಡಲಾಗುವುದೆಂದು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಭರವಸೆ ನೀಡಿದ ಡಿಸಿ ಗುರುದತ್ತ ಹೆಗಡೆ
ಮುಷ್ಕರ ಎರಡನೇ ದಿನಕ್ಕೆ ಕಾಲಿಡುತ್ತಿದ್ದಂತೆ ಮತ್ತು ಮೂವರು ಶಿಕ್ಷಕಿಯರು ಅಸ್ವಸ್ಥಗೊಳ್ಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಒಕ್ಕೂಟದ ಬೇಡಿಕೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಶೀಘ್ರದಲ್ಲೇ ಬೇಡಿಕೆ ಈಡೇರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ರತಿಭಟನೆ ಕೈಬಿಟ್ಟು ಸಹಕರಿಸುವಂತೆ ಮನವಿ ಮಾಡಿದರು. ಡಿಸಿ ಮನವಿ ಮೇರೆಗೆ ಒಕ್ಕೂಟದ ಪದಾಧಿಕಾರಿಗಳು ಚರ್ಚಿಸಿ ಅಹೋರಾತ್ರಿ ಧರಣಿ ಹಿಂಪಡೆದರು.