ಸಾಗರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 200 ಗ್ರಾಮಗಳ ಹಳ್ಳಿಗಳ ಜನರಿಗೆ ಉಪಯೋಗವಾಗಲು ಸಂಚಾರ ಆರೋಗ್ಯ ಘಟಕ ಆರಂಭಿಸಿದ್ದು, ಸಾಗರದ 150, ಹೊಸನಗರ ಭಾಗದ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಆರೋಗ್ಯ ಘಟಕದ ಸೇವೆ ಸಿಗಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರದ ಎಸಿ ಕಚೇರಿ ಎದುರು ಆರೋಗ್ಯ ಇಲಾಖೆಯಿಂದ ಸಂಚಾರ ಆರೋಗ್ಯ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುವುದು ಮುಖ್ಯ ಆಶಯ. ವೈದ್ಯ, ನರ್ಸ್ ಹಾಗೂ ಪ್ರಯೋಗಾಲಯ ತಜ್ಞರು ಸಂಚಾರ ಘಟಕದಲ್ಲಿರುತ್ತಾರೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟ ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ. ಸಿಎಂ, ಡಿಸಿಎಂ, ಆರೋಗ್ಯ ಸಚಿವರು ಮಾತುಕತೆ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.
ಸಾಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ 1 ಕೋಟಿ ರೂ. ಅನುದಾನ ಮಂಜೂರಾಗಿದೆ. ನ್ಯಾಕ್ ಮಾನ್ಯತೆ ಹೊಂದಿರುವುದರಿಂದ ಅಭಿವೃದ್ಧಿಗೆ 25-30 ಕೋಟಿ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ. ವಿಪತ್ತು ನಿರ್ವಹನೆಗೆ 20 ಕೋಟಿ ರೂ. ಮಂಜೂರಾಗಿದೆ ಎಂದರು.