ಕಾರ್ಗಲ್: ಜೋಗ ಜಲಪಾತ ಕಣಿವೆಯ ಆಳಕ್ಕೆ ಧುಮ್ಮಿಕ್ಕುವ, ಪ್ರಕೃತಿಯ ಸಹಜ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಭಾನುವಾರ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದರು.
ಶರಾವತಿ ಕಣಿವೆಯಲ್ಲಿ ಮಳೆ ಮತ್ತೆ ಚುರುಕಾಗಿದ್ದು, ಜೋಗ ಫಾಲ್ಸ್ನ ರಾಜಾ, ರೋರರ್, ರಾಕೆಟ್ ಹಾಗೂ ಲೇಡಿ (ರಾಣಿ) ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತಿವೆ.
ಆಗಾಗ ಜಲಪಾತ ಮಂಜಿನಲ್ಲಿ ಮುಚ್ಚುತ್ತಿದ್ದಂತೆ ಪ್ರವಾಸಿಗರು ಮತ್ತೇ ಒಂದಿಷ್ಟು ಸಮಯ ಕಾಯಬೇಕು. ಮಂಜಿನಲ್ಲಿ ಮರೆಯಾದ ಜಲಪಾತ ಮತ್ತೆ ಗೋಚರಿಸುತ್ತದ್ದಂತೆ ಪ್ರವಾಸಿಗರನ್ನು ಜಲಪಾತದ ದರ್ಶನ ಪಡೆಯಲು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಜಲಸಿರಿಯನ್ನು ಆಗಾಗ್ಗೆ ಮಂಜು ಆವರಿಸಿದಾಗ ಪ್ರವಾಸಿಗರು ನಿರಾಸೆ ಅನುಭವಿಸುತ್ತಿದ್ದರು. ಪುನಃ ಕಾಣಿಸಿಕೊಂಡಾಗ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದರು. ಸಂಜೆವರೆಗೆ ಪ್ರವಾಸಿಗರೂ ಆಗಮಿಸುತ್ತಲೇ ಇದ್ದರು.
ಶನಿವಾರ ಹಾಗೂ ಭಾನುವಾರ ರಜೆ ಇದ್ದುದರಿಂದ ಜೋಗ ಫಾಲ್ಸ್ ಪ್ರವೇಶ ದ್ವಾರದ ಹೊರಭಾಗದ ಕಾರ್ಗಲ್ ರಸ್ತೆ ಹಾಗೂ ಸೀತಾಕಟ್ಟೆ ಸೇತುವೆ ಮಾರ್ಗದ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಪ್ರವಾಸಿ ವಾಹನಗಳು ರಸ್ತೆಯ ಬದಿಯಲ್ಲಿ ಸಾಲುಗಟ್ಟಿ ನಿಲ್ಲಿಸಲಾಗಿತ್ತು. ಪ್ರವಾಸಿಗರ ಫೋಟೋಗಳನ್ನು ತೆಗೆದು ಕ್ಷಣಮಾತ್ರದಲ್ಲಿ ನೀಡುವ ಸ್ಥಳೀಯ ಛಾಯಾಗ್ರಾಹಕರು ಕಾಯಕದಲ್ಲಿ ನಿರತರಾಗಿದ್ದರು. ಗೂಡಂಗಡಿಗಳಲ್ಲಿಯೂ ವ್ಯಾಪಾರ ವಹಿವಾಟು ಜೋರಾಗಿತ್ತು.
ಜಲಪಾತವನ್ನು ವೀಕ್ಷಿಸಲು ಒಳಪ್ರವೇಶ ಪಡೆದ ಪ್ರವಾಸಿಗರ ಸಂಖ್ಯೆ ಸಂಜೆ ಹೊತ್ತಿಗೆ 9 ಸಾವಿರ ದಾಟಿತ್ತು. ಭದ್ರತಾ ಕಾರ್ಯದಲ್ಲಿ 8 ಮಂದಿ ಹೋಂ ಗಾರ್ಡ್ಸ್, ಇಬ್ಬರು ಪ್ರವಾಸಿ ಮಿತ್ರರು ಹಾಗೂ ಹತ್ತು ಮಂದಿ ಪ್ರಾಧಿಕಾರದ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ ಎಂದು ಜೋಗ ನಿರ್ವಹಣಾ ಪ್ರಾಧಿಕಾರದ ಭದ್ರತಾ ಮೇಲ್ವಿಚಾರಕ ಭಾಸ್ಕರ್ ತಿಳಿಸಿದರು.