ಗೋವರ್ಧನ ಟ್ರಸ್ಟ್‌ನ ಗೋಸೇವಾ ಮಾಸದ ಅಭಿಯಾನಕ್ಕೆ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ಕೆ.ಎಸ್.ಈಶ್ವರಪ್ಪ, ಉಮೇಶ್ ಆರಾಧ್ಯ, ಸಂದೇಶ ಉಪಾಧ್ಯ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಬೇಸರ
ಗೋಸೇವಾ ಮಾಸದ ಅಭಿಯಾನಕ್ಕೆ ಚಾಲನೆ
ಗೋವರ್ಧನ ಟ್ರಸ್ಟ್‌ನಿಂದ ಗೋರಕ್ಷಣೆಗೆ ಸಿಗಲಿದೆ ಬಲ
ಶಿವಮೊಗ್ಗ: ಗೋಸಂತತಿಯನ್ನೇ ಸಂಪತ್ತು (weailth) ಎಂದು ಪರಿಗಣಿಸಿದ್ದ ಕಾಲವೊಂದಿತ್ತು. ಯಾರ ಬಳಿ ಎಷ್ಟು ಗೋವುಗಳಿವೆ ಎಂಬುದನ್ನು ಪರಿಗಣಿಸಿ ಅವರ ಶ್ರೀಮಂತಿಕೆ ಅಂದಾಜು ಮಾಡಲಾಗುತ್ತಿತ್ತು. ಆದರೆ ಇಂದು ಗೋವು (cow) ಸಂಪತ್ತಾಗಿ ಉಳಿದಿಲ್ಲ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ (swamiji) ಬೇಸರ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಗೋವರ್ಧನ ಟ್ರಸ್ಟ್‌ನ ಗೋಸೇವಾ ಮಾಸದ ಅಭಿಯಾನಕ್ಕೆ ಸೋಮವಾರ ಬೆಕ್ಕಿನ ಕಲ್ಮಠದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ದಶಕಗಳ ಹಿಂದೆ ಪ್ರತಿ ಮನೆಗಳಲ್ಲೂ ಗೋಶಾಲೆ ಇರುತ್ತಿತ್ತು. ಆದರೆ ಇಂದು ಸಮಾಜ ಗೋವನ್ನು ಕಡೆಗಣಿಸಿದೆ ಎಂದು ತಿಳಿಸಿದರು.
ಗೋವರ್ಧನ ಟ್ರಸ್ಟ್ ಸಂಪೂರ್ಣ ಜೂನ್ ತಿಂಗಳನ್ನು ಗೋಸೇವಾ ಮಾಸ ಎಂದು ಅಭಿಯಾನದ ರೂಪದಲ್ಲಿ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದು ಬೇರೆಯವರಿಗೂ ಸ್ಪೂರ್ತಿ ತುಂಬಲಿದೆ. ಇದರಿಂದ ಗೋಸಂರಕ್ಷಣೆಗೂ ಬಲ ಸಿಗಲಿದೆ ಎಂದರು.
ಆನಂದಪುರದ ಮುರುಘಾಮಠದಲ್ಲಿರುವ ಗೋಶಾಲೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಒಂದು ಗೋಶಾಲೆ ನಡೆಸುವುದೇ ಕಷ್ಟವಾಗಿದೆ. ಹೀಗಿರುವಾಗ ಗೋವರ್ಧನ ಟ್ರಸ್ಟ್‌ನಿಂದ ನಾಲ್ಕೈದು ಗೋಶಾಲೆಗಳಿಗೆ ಮೇವು ಪೂರೈಸುತ್ತಿರುವುದು, ಗೋವುಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ಆಂಬುಲೆನ್ಸ್ ಒದಗಿಸಿರುವುದು ಪ್ರೇರಣಾದಾಯಕ ಕೆಲಸ ಎಂದು ಹೇಳಿದರು.
ಗೋವರ್ಧನ ಟ್ರಸ್ಟ್ ಈವರೆಗೆ ಗೋಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಗಳ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಟ್ರಸ್ಟ್ ಮಹಾಪೋಷಕ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಸಂದೇಶ ಉಪಾಧ್ಯ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಉಮೇಶ್ ಆರಾಧ್ಯ, ವಿ.ಕೆ.ಜೈನ್, ಸಂತೋಷ್, ರಮೇಶ್ ಬಾಬು, ಉಮಾಪತಿ ಇತರರಿದ್ದರು.
ಟ್ರಸ್ಟ್ ಕಾರ್ಯವೈಖರಿ
ಶಿವಮೊಗ್ಗದಲ್ಲಿ ಪ್ರಸ್ತುತ ಮೂರು ಗೋಶಾಲೆ ಕಾರ್ಯನಿರ್ವಹಿಸುತ್ತಿವೆ. ನಮ್ಮ ಟ್ರಸ್‌ನಿಂದ ವಿಶ್ವಬಂಧು ಎಂಬ ಹೆಸರಿನಲ್ಲಿ ಮತ್ತೊಂದು ಗೋಶಾಲೆ ಪ್ರಾರಂಭಿಸಲಾಗಿದೆ. ಗೋಶಾಲೆಗೆ ಮೇವು ಬೆಳೆಯಲು ದಾನಿಗಳು 22 ಎಕರೆ ಜಾಗ ನೀಡಿದ್ದಾರೆ. ಎಲ್ಲ ಗೋಶಾಲೆಗಳಿಗೂ ಮೇವು ಒದಗಿಸಲಾಗುವುದು. ಹೊಸನಗರದ ರಾಮಚಂದ್ರಾಪುರ ಮಠದಿಂದ ವಿಶ್ವಬಂಧು ಗೋಶಾಲೆಗೆ 25 ಹಸು ನೀಡಲಾಗಿದೆ. ಇನ್ನೂ 250 ಹಸುಗಳನ್ನು ನೀಡುವುದಾಗಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ನಾವು ನಡೆಸುತ್ತಿರುವ ಗೋಸೇವೆಯಲ್ಲಿ ಪ್ರತಿ ಗೋಪ್ರೇಮಿಯೂ ಭಾಗಿಯಾಗಬಹುದು. ಮಾಸಿಕ 100 ರೂ. ನೀಡಿ ಗೋವರ್ಧನ ಟ್ರಸ್ಟ್‌ನ ಸದಸ್ಯರಾಗಲು ಅನೇಕರು ಮುಂದೆ ಬರುತ್ತಿದ್ದಾರೆ ಎಂದು ಟ್ರಸ್ಟ್ ಮಹಾಪೋಷಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.