ಶಿಕಾರಿಪುರ: ಪರೋಪಕಾರದಿಂದ ಬದುಕು ಸಾರ್ಥಕವಾಗುತ್ತದೆ. ಈ ಸಮಾಜದ ಋಣ ನಮ್ಮ ಮೇಲಿದೆ. ಸಾಲುಮರದ ತಿಮ್ಮಕ್ಕ ಅವರು ನಮಗೆ ಪ್ರತ್ಯಕ್ಷ ಉದಾಹರಣೆ ಎಂದು ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಹೇಳಿದರು.
ಶಿಕಾರಿಪುರದಲ್ಲಿ ಪರೋಪಕಾರಂನ ಸೇವಾ ಕಾರ್ಯ ಹಾಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ಪ್ರಕೃತಿಯ ರಕ್ಷಣೆಯನ್ನೇ ತಮ್ಮ ಕಾಯಕ ಮಾಡಿಕೊಂಡಿದ್ದ ವೃಕ್ಷಮಾತೆ ಸ್ವಾರ್ಥರಹಿತ ಕಾಯಕದಿಂದ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಹಿತ್ಲ ಸರ್ಕಾರಿ ಪದವಿಪೂರ್ವ ಕಾಲೇಜು ಮುಖ್ಯ ಶಿಕ್ಷಕ ಮಹೇಶ್ವರ ಸ್ವಾಮಿ ಮಾತನಾಡಿ, 114 ವರ್ಷ ಬದುಕಿದ ವೃಕ್ಷಮಾತೆ ತಿಮ್ಮಕ್ಕ ಪ್ರಕೃತಿಯ ಉಳಿವಿಗಾಗಿ ಶ್ರಮಿಸಿದ್ದು ನಮ್ಮೆಲ್ಲರಿಗೂ ಆದರ್ಶ. ಅವರು ಹಾಕಿದ ಹೆಜ್ಜೆಯ ಗುರುತುಗಳನ್ನು ನಾವು ಅನುಸರಿಸಬೇಕು ಎಂದು ಹೇಳಿದರು.
ಪರೋಪಕಾರಂ ಸಂಸ್ಥೆ ಸದಸ್ಯರು ಸ್ವಚ್ಛತೆಯ ಕಾರ್ಯಕ್ರಮವನ್ನು ಒಂದಿಲ್ಲೊಂದು ಕಡೆ ಮಾಡುತ್ತಾರೆ. ಪ್ರತಿಲಾಪೇಕ್ಷೆ ಇಲ್ಲದೆ ಸಮಾಜಮುಖಿ ಕಾರ್ಯ ಮಾಡುತ್ತಾರೆ. ಪರೋಪಕಾರಂ ಕೂಡ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಪ್ರಕಾಶ್, ಮಂಜಪ್ಪ, ಕೆ.ವೆಂಕಟೇಶ್, ಜೆಸಿಐ ಚಂದನ ಅಧ್ಯಕ್ಷ ಶಾಂತರಾಮ್ ಸೇಠ್, ಪೃಥ್ವಿ, ಸಂತೋಷ್, ಗಿರಿಧರ್, ಆರೋಗ್ಯ ಇಲಾಖೆಯ ಶ್ರೀಧರ್, ಲಕ್ಷ್ಮಣ್, ರಾಜೇಶ್, ಾರೂಕ್, ಹನುಮಂತಪ್ಪ ಇತರರಿದ್ದರು.