ಸೊರಬದ ಚಿಕ್ಕಪೇಟೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಡಾ. ಕೆ.ಪ್ರಭು ಸಾಹುಕಾರ್ ಉದ್ಘಾಟಿಸಿದರು. ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ ಇತರರಿದ್ದರು.
ಸೊರಬ: ಒಂದು ಪುಸ್ತಕಕ್ಕೆ ವ್ಯಕ್ತಿಯ ಬದುಕು ಬದಲಾವಣೆ ಮಾಡಲು ಸಾಧ್ಯವಿದೆ. ಒಂದು ಗ್ರಂಥಾಲಯಕ್ಕೆ ಇಡೀ ಯುವಪೀಳಿಗೆಯನ್ನು ಬದಲಾಯಿಸುವ ಸಾಮರ್ಥ್ಯವಿದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯ ಕೆ.ಪ್ರಭು ಸಾಹುಕಾರ್ ಹೇಳಿದರು.
ಪಟ್ಟಣದ ಚಿಕ್ಕಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಮಿತಿ ಮೀರಿದ ಮೊಬೈಲ್ ಬಳಕೆ ಮಗುವಿನ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಪುಸ್ತಕವನ್ನು ಮನೆಗೆ ತರುವ ಮೂಲಕ ಗ್ರಂಥಾಲಯ ನಿರ್ಮಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಒಂದು ವರ್ಷದಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಮನೆಗೊಂದು ಗ್ರಂಥಾಲಯ ಆರಂಭ ಮಾಡುವ ಉದ್ದೇಶ ಹೊಂದಲಾಗಿದೆ. ಯುವಜನರು ಮತ್ತು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಮತ್ತು ಜ್ಞಾನಾರ್ಜನೆ ಹೆಚ್ಚಿಸುವಲ್ಲಿ ಕಾರ್ಯಕ್ರಮ ಪೂರಕವಾಗಿದೆ ಎಂದು ತಿಳಿಸಿದರು.
ಹಿರೇಮಾಗಡಿ ಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವರುದ್ರಪ್ಪ ಜೋಗಿ, ಚೇತನಾ ಆನಂದ ನಾಯಕ್ ಗಾಯನ ನಡೆಸಿಕೊಟ್ಟರು. ಜಾನಪದ ಕಲಾವಿದ ಬೇಗೂರು ಶಿವಪ್ಪ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಅರ್ಚಕ ಮಹೇಶ್ ಗೋಖಲೆ, ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಉಪನ್ಯಾಸಕ ಡಾ. ಉಮೇಶ್ ಭದ್ರಾಪುರ, ಮಹೇಶ್ ಖಾರ್ವಿ, ನಿವೃತ್ತ ಶಿಕ್ಷಕ ಸದಾನಂದ, ನಿಜಗುಣ ಚಂದ್ರಶೇಖರ್ ಇತರರಿದ್ದರು.