ಸೊರಬ ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲ | Pressmeet

ಸೊರಬ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ತಾಲೂಕು ಉಪಾಧ್ಯಕ್ಷ ಡಾ. ಜ್ಞಾನೇಶ್ ಮಾತನಾಡಿದರು. ಪ್ರಕಾಶ್ ಅಗಸನಹಳ್ಳಿ, ಪಾಣಿ ರಾಜಪ್ಪ, ಜಾನಕಪ್ಪ ಇದ್ದರು.
ಸೊರಬ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ತಾಲೂಕು ಉಪಾಧ್ಯಕ್ಷ ಡಾ. ಜ್ಞಾನೇಶ್ ಮಾತನಾಡಿದರು. ಪ್ರಕಾಶ್ ಅಗಸನಹಳ್ಳಿ, ಪಾಣಿ ರಾಜಪ್ಪ, ಜಾನಕಪ್ಪ ಇದ್ದರು.
Published on
ಸೊರಬ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಚಿಕಿತ್ಸೆಗೆ ಬರುವ ರೋಗಿಗಳು ಪರದಾಡುವಂತಾಗಿದೆ. ಕಾಂಗ್ರೆಸ್ ದುರಾಡಳಿತದಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ವೈದರ ಕೊರತೆ ಜತೆಗೆ ಕನಿಷ್ಠ ಸೌಲಭ್ಯಗಳೂ ಇಲ್ಲ. ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಸೋಮವಾರ ತಾಲೂಕಿನ ಯುವಕನೊಬ್ಬ ಮೃತಪಟ್ಟಿರುವುದು ಜನವಿರೋಧಿ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.
ಬಿಜೆಪಿ ತಾಲೂಕು ಉಪಾಧ್ಯಕ್ಷ ಡಾ. ಜ್ಞಾನೇಶ್ ಮಾತನಾಡಿ, ತಾಲೂಕಿನ ಮಾಕೊಪ್ಪ ಗ್ರಾಮದ ಯುವಕ ಗಜೇಂದ್ರ ಕೃಷಿ ಕೆಲಸ ಮಾಡುವಾಗ ಕುಸಿದು ಬಿದ್ದಾಗ ಆಸ್ಪತ್ರೆಗೆ ಸೇರಿಸಲು ವಾಹನವಿಲ್ಲದೆ ಸಾವಿಗೀಡಾಗಿದ್ದಾನೆ. ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇಂತಹ ಜನಪ್ರತಿನಿಧಿಗಳನ್ನು ದೂರವಿಡುವ ಕಾಲ ಸನಿಹವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೋ, ಇಲ್ಲವೋ ಎನ್ನುವ ಪ್ರಶ್ನೆ ಕಾಡುತ್ತಿದೆ. ಜನರ ಕಷ್ಟಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ತಾಲೂಕಿನ ಜನಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ 6 ಆಂಬುಲೆನ್ಸ್‌ಗಳ ಅವಶ್ಯಕತೆ ಇದೆ. 3 ವಾಹನಗಳನ್ನು ಒದಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇರುವ ಒಂದೇ ಒಂದು ವಾಹನವೂ ಕೆಟ್ಟು ನಿಂತಿದೆ. ದೂರದ ಗ್ರಾಮದಿಂದ ರೋಗಿಗಳನ್ನು ಆಸ್ಪತ್ರೆಗೆ ಕರೆತರಲು ಆಂಬುಲೆನ್ಸ್‌ಗೆ ಕರೆ ಮಾಡಿದರೆ ಶಿರಾಳಕೊಪ್ಪದಿಂದ ತರಿಸಿಕೊಳ್ಳಿ ಎನ್ನುವ ಉತ್ತರ ಬರುತ್ತದೆ.
ಜಿಲ್ಲೆ ಹಾಗೂ ತಾಲೂಕಿನಲ್ಲಿ ಪ್ರಭಾವಿ ಸಚಿವರಿದ್ದರೂ ಒಂದೇ ಒಂದು ಆಂಬುಲೆನ್ಸ್ ಇಲ್ಲ. ಆಸ್ಪತ್ರೆಯಲ್ಲಿ 12 ವೈದ್ಯರು ಕಾರ್ಯ ನಿರ್ವಹಿಸಬೇಕು. ಕೇವಲ ಮೂವರು ವೈದ್ಯರಿದ್ದಾರೆ. ವೈದ್ಯಕೀಯ ಸೇವೆ ಲಭ್ಯತೆ ಇಲ್ಲದಿರುವಾಗ ಪಕ್ಕದ ತಾಲೂಕಿನ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯಲು ಕನಿಷ್ಠ ವಾಹನ ವ್ಯವಸ್ಥೆಯೂ ಇಲ್ಲ. ತಾಲೂಕು ಆಸ್ಪತ್ರೆಯಲ್ಲಿ ಎಕ್ಸ್-ರೇ ಯಂತ್ರವಿಲ್ಲ. ಇದು ಕಾಂಗ್ರೆಸ್ ಸರ್ಕಾರದ ವೈಲ್ಯ. ಅಷ್ಟೇ ಅಲ್ಲ ಸಚಿವರು ತಮ್ಮ ಸ್ವಕ್ಷೇತ್ರದಲ್ಲೇ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡಿಲ್ಲ. ಮುಂದಿನ 15 ದಿನದಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಜಾನಕಪ್ಪ ಯಲಸಿ, ರವೀಶ್ ಮಾಕೊಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net