ಹೊಳೆಹೊನ್ನೂರು ಸಮೀಪದ ಚಂದನಕೆರೆಯಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಶಾರದಾ ಪೂರ‌್ಯಾನಾಯ್ಕಾ, ಪಾಲಾಕ್ಷಪ್ಪ, ಎಚ್.ಎನ್.ನಾಗರಾಜ್ ಇತರರಿದ್ದರು.
Published on:
Copied
Follow Us
ಹೊಳೆಹೊನ್ನೂರು: ಮದ್ಯವ್ಯಸನಿಗಳಲ್ಲಿ ಅಧಿಕವಾಗಿ ಯುವ ಸಮೂಹವೇ ಹೆಚ್ಚಾಗಿದ್ದು, ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಚಂದನಕೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಯುವಪೀಳಿಗೆ ಕುಡಿತದ ದಾಸರಾಗಿ ಮನೆಗೆ ಮಾರಿಗಳಾಗಿದ್ದಾರೆ. ಮನೆಗಳಲ್ಲಿ ಪ್ರತಿದಿನ ಜಗಳವಾಡುವುದು ಸಾಮಾನ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆರೋಗ್ಯ ಸಮಸ್ಯೆಯಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗಿದೆ. ಆರ್ಥಿಕವಾಗಿ ಸಂಸಾರಗಳು ಕಷ್ಟದ ಹಾದಿ ಹಿಡಿಯುತ್ತಿವೆ. ವ್ಯಸನಮುಕ್ತವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಕೂಲ ಒದಗಿಸುತ್ತಿದೆ ಎಂದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ವಿವಾಹಿತರಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಟುಂಬ ಕಲಹಗಳಿಂದ ಮಹಿಳೆಯರು ಸಾವಿಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಮದ್ಯಪಾನ ತ್ಯಜಿಸಿ ಸುಖ ಸಂಸಾರ ನಡೆಸಬೇಕು ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಎಚ್.ಬಸಪ್ಪ, ಎಚ್.ಎನ್.ನಾಗರಾಜ್, ಮೋಹನ್ ಜಿ. ಶೆಟ್ಟಿ, ಎಂ.ಪಾಲಾಕ್ಷಪ್ಪ, ಬಿ.ಗೀತಾ, ಅಜಯ್‌ಕುಮಾರ್, ಮಂಜುನಾಥ್, ಅಜಯ್, ಶ್ರೀನಿವಾಸ್, ರುದ್ರೋಜಿರಾವ್, ಬಸವರಾಜ್, ರುದ್ರೇಶ್ ಇತರರಿದ್ದರು.