ತ್ಯಾಗರ್ತಿಯಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮವನ್ನು ಭಾರತೀ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಅರುಣ್‌ಕುಮಾರ್,ಪ್ರತಿಮಾ ಜೋಗಿ, ಶ್ರೀಧರ ಇದ್ದರು.
Published on:
Copied
Follow Us
ತ್ಯಾಗರ್ತಿ: ಜಗತ್ತಿಗೆ ಒಳಿತು ಬಯಸುವ ಹಿಂದೂ ಧರ್ಮದ ಸಂಸ್ಕೃತಿ ಮತ್ತು ಮೂಲ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಹಿರಿಯರು ಮಾಡಬೇಕು ಆರ್‌ಎಸ್‌ಎಸ್ ಪ್ರಚಾರಕ ಅರುಣ್‌ಕುಮಾರ್ ತೀರ್ಥಹಳ್ಳಿ ಹೇಳಿದರು.
ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ನಮ್ಮ ದೇಶದ ಅಸ್ಮಿತೆ. ಜಗತ್ತಿನ ಸರ್ವರಿಗೂ ಒಳಿತಾಗಬೇಕು ಎಂಬುದು ಹಿಂದೂ ಧರ್ಮದ ಉದ್ದೇಶ ಎಂದರು.
ನಮಗೆ ಬೇರೆ ಧರ್ಮಗಳ ಬಗ್ಗೆ ಗೌರವವಿದೆ. ನಮ್ಮಲ್ಲಿ ವಿವಿಧ ವೃತ್ತಿ, ಕಸುಬುಗಳಿಗೆ ಅನುಗುಣವಾಗಿ ಅನೇಕ ಜಾತಿ, ಸಮುದಾಯಗಳಿದ್ದರೂ ನಾವು ಹಿಂದೂ ಧರ್ಮದ ಅನುಯಾಯಿಗಳು. ಆದರೆ ನಮ್ಮ ಧರ್ಮ, ಸಂಸ್ಕೃತಿಗೆ ಧಕ್ಕೆಯಾಗದಂತೆ ಕಾಪಾಡಿಕೊಂಡು ಬದುಕಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತ್ಯಾಗರ್ತಿ ಸತ್ಯಪೀಠದ ಪರಮಹಂಸ ಭಾರತೀ ತೀರ್ಥ ಸ್ವಾಮೀಜಿ ಮಾತನಾಡಿ, ನಾವು ಬೆಳೆದ ಹಾದಿ ಸರಿಯಾಗಿದೆಯೇ ಎಂಬುದನ್ನು ನೋಡಿಕೊಂಡರೆ ನಮ್ಮ ತಪ್ಪುಗಳನ್ನು ಸರಿಪಡಿಸಲು ಸಾಧ್ಯ. ವೇದಗಳು, ಉಪನಿಷತ್ತುಗಳ ತಿರುಳನ್ನು ಎಲ್ಲರೂ ಅರಿತರೆ ಧರ್ಮ ರಕ್ಷಣೆ ಸಾಧ್ಯ ಎಂದು ಹೇಳಿದರು
ವಿಎಚ್‌ಪಿ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ನಮ್ಮ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮತನವನ್ನು ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.
ಭಾರತಮಾತೆಯ ಭಾವಚಿತ್ರವನ್ನು ವಾಹನದಲ್ಲಿರಿಸಿ ಕಾಳೇಶ್ವರ ದೇವಸ್ಥಾನದಿಂದ ಭಜನೆ ಹಾಗೂ ಚೆಂಡೆ ವಾದ್ಯಗಳೊಂದಿಗೆ ಶೋಭಾಯಾತ್ರೆ ನಡೆಸಲಾಯಿತು.