ಅಂಗವಿಕಲರ ಆತ್ಮಬಲ ತುಂಬ ಗಟ್ಟಿ | Fecility distribute

ಸಾಗರದಲ್ಲಿ ಕೇಂದ್ರ ಸರ್ಕಾರಿಂದ ಅಂಗವಿಕಲರಿಗೆ ಸಾಧನ, ಸಲಕರಣೆಗಳನ್ನು ವಿತರಿಸಲಾಯಿತು. ಬಿ.ವೈ.ರಾಘವೇಂದ್ರ, ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್, ಜಬನ್ಜೀತ್, ಮಾರುತೀ ಕೃಷ್ಣೇಗೌಡ, ಸ್ವಪ್ನಾ ಸುರೇಶ್, ಎಚ್.ಎಸ್.ಮಂಜಪ್ಪ ಇತರರಿದ್ದರು.
ಸಾಗರದಲ್ಲಿ ಕೇಂದ್ರ ಸರ್ಕಾರಿಂದ ಅಂಗವಿಕಲರಿಗೆ ಸಾಧನ, ಸಲಕರಣೆಗಳನ್ನು ವಿತರಿಸಲಾಯಿತು. ಬಿ.ವೈ.ರಾಘವೇಂದ್ರ, ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್, ಜಬನ್ಜೀತ್, ಮಾರುತೀ ಕೃಷ್ಣೇಗೌಡ, ಸ್ವಪ್ನಾ ಸುರೇಶ್, ಎಚ್.ಎಸ್.ಮಂಜಪ್ಪ ಇತರರಿದ್ದರು.
Published on
ಸಾಗರ: ಅಂಗವಿಕಲರು ದೈಹಿಕವಾಗಿ ಸವಾಲುಗಳನ್ನು ಎದುರಿಸುತ್ತಿದ್ದರೂ ಆತ್ಮಬಲದಿಂದ ಮುನ್ನಡೆಯುತ್ತಿರುತ್ತಾರೆ. ಸರ್ಕಾರ ಮತ್ತು ಸಮಾಜ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸಾಗರದ ಲಯನ್ಸ್ ಕ್ಲಬ್, ಸಾಗರದ ಶೃಂಗೇರಿ ಶಂಕರಮಠ ಹಾಗೂ ಕೇಂದ್ರ ಸರ್ಕಾರದ ಪ್ರಾದೇಶಿಕ ಕೌಶಲಾಭಿವೃದ್ಧಿ ಪುನರ್ವಸತಿ ಮತ್ತು ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಕೇಂದ್ರ (ಸಿಆರ್‌ಸಿಎಸ್‌ಬಿ)ದಿಂದ 1.27 ಕೋಟಿ ರೂ. ವೆಚ್ಚದಲ್ಲಿ ಸೋಮವಾರ ಸಾಧನ, ಸಲಕರಣೆ ವಿತರಿಸಿ ಮಾತನಾಡಿದರು.
ಯುವಶಕ್ತಿಯನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇಂದು ಲಯನ್ಸ್ ಕ್ಲಬ್ ಸಾಗರದಲ್ಲಿ ಅಂಗವಿಕಲರಿಗೆ ಉಚಿತ ಆಸರೆ, ಸಲಕರಣೆಗಳನ್ನು ವಿತರಿಸಿ ಕೇಂದ್ರ ಸರ್ಕಾರದ ಯೋಜನೆಯನ್ನು ಅರ್ಹರಿಗೆ ತಲುಪಿಸುವಲ್ಲಿ ಕೈಗೊಂಡಿರುವ ಕ್ರಮ ಶ್ಲಾಘನೀಯ. ಅಂಗವಿಕಲರಿಗೆ ಸಮಾಜದ ಅನುಕಂಪಕ್ಕಿಂತ ಅವರನ್ನು ಪ್ರೋತ್ಸಾಹಿಸಿ ಮುನ್ನಡೆಸುವ ಕೆಲಸ ಆಗಬೇಕಿದೆ ಎಂದರು.
ತಂತ್ರಜ್ಞಾನದ ಬಳಕೆಯಿಂದ ಉಪಯೋಗ ಎಷ್ಟಿದೆಯೋ ಅಷ್ಟೇ ಅಪಾಯವೂ ಇದೆ. ಯುವಜನರು ತೀವ್ರ ಮೊಬೈಲ್ ಬಳಕೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅವರನ್ನು ಸರಿದಾರಿಗೆ ಕೊಂಡೊಯ್ಯುವಲ್ಲಿ ಸಮಾಜ ಮತ್ತು ಸಂಘ ಸಂಸ್ಥೆಗಳು ವ್ಯವಸ್ಥಿತವಾಗಿ ಮಾರ್ಗದರ್ಶನ ನೀಡಬೇಕು. ಕೇಂದ್ರ ಸರ್ಕಾರವು ಬಡವರು, ಅಶಕ್ತರು, ಅಂಗವಿಕಲರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ತಲುಪಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸಿರಿ ಬಂದ ಕಾಲಕ್ಕೆ ದಾನ ಮಾಡಬೇಕು ಎನ್ನುವ ಮಾತಿದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಸಾಗರದಲ್ಲಿ ಸಾಮಾಜಿಕ ಸೇವೆಗೆ ಹಣ ಉಳ್ಳವರು ನಿರಂತರವಾಗಿ ಸಹಕರಿಸುತ್ತ ಬಂದಿದ್ದಾರೆ. ತಾಲೂಕಿನಲ್ಲಿ ಎರಡು ಸಾವಿರಕ್ಕೂ ಅಧಿಕ ಅಂಗವಿಕಲರನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಸಾಧನಾ ಸಲಕರಣೆಗಳನ್ನು ನೀಡಲು ಸಹಕರಿಸುತ್ತಿದೆ ಎಂದರು.
ಒಡಿಶಾದ ಜಬನ್ಜೀತ್ ಹಾಗೂ ಮಾರುತೀ ಕೃಷ್ಣೇಗೌಡ ಅವರು ಕೇಂದ್ರ ಸರ್ಕಾರ ನೀಡುವ ಸಲಕರಣೆಗಳನ್ನು ಬಳಸುವ ವಿಧಾನ ಕುರಿತು ಮಾಹಿತಿ ನೀಡಿದರು. ಸ್ವಪ್ನಾ ಸುರೇಶ್, ಎಚ್.ಎಸ್.ಮಂಜಪ್ಪ, ಶ್ರೀನಿವಾಸಮೂರ್ತಿ, ಅಶೋಕ ಬೇಳೂರು, ಟಿ.ವಿ.ಪಾಂಡುರಂಗ, ಈಳಿ ಶ್ರೀಧರ್, ನಾಗರಾಜ್ ಗುಡ್ಡೇಮನೆ, ಪ್ರಭಾಕರ ಜೈನ್, ಇ.ನಾಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net