ಬಣ್ಣದಾಟದಲ್ಲಿ ಮಿಂದೆದ್ದ ಮಲೆನಾಡಿಗರು | Holi festival

ಶಿವಮೊಗ್ಗ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಬಣ್ಣದೋಕಳಿ ಮತ್ತು ರೇನ್ ಡ್ಯಾನ್ಸ್‌ನಲ್ಲಿ ಮಿಂದೆದ್ದ ಯುವ ಸಮೂಹ.
ಶಿವಮೊಗ್ಗ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಬಣ್ಣದೋಕಳಿ ಮತ್ತು ರೇನ್ ಡ್ಯಾನ್ಸ್‌ನಲ್ಲಿ ಮಿಂದೆದ್ದ ಯುವ ಸಮೂಹ.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ ಜಿಲ್ಲಾದ್ಯಂತ ಮನೆ ಮಾಡಿದ ಹೋಳಿ ಹಬ್ಬದ ಸಂಭ್ರಮ
  • ವಯಸ್ಸಿನ ಮಿತಿ ಇಲ್ಲದೇ ತಂಡೋಪತಂಡವಾಗಿ ಪರಸ್ಪರ ಬಣ್ಣದಾಟ
  • ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ರೇನ್ ಡ್ಯಾನ್ಸ್ ಹಾಗೂ ಡಿಜೆ ವ್ಯವಸ್ಥೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾದ್ಯಂತ ಬುಧವಾರ ಹೋಳಿ ಹಬ್ಬ(Holi habba)ದ ಸಂಭ್ರಮ ಮನೆ ಮಾಡಿತ್ತು. ಬಹುತೇಕ ಎಲ್ಲ ತಾಲೂಕು, ಪಟ್ಟಣಗಳ ವ್ಯಾಪ್ತಿಯಲ್ಲಿ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು, ವಯಸ್ಕರೂ ಕಾಮಣ್ಣನ ಮರೆವಣಿಗೆಯೊಂದಿಗೆ ಪರಸ್ಪರ ಬಣ್ಣದಾಟದಲ್ಲಿ ಮಿಂದೆದ್ದರು.
ವಯಸ್ಸಿನ ಮಿತಿ ಇಲ್ಲದೇ ಬೆಳಗ್ಗೆಯಿಂದಲೇ ತಂಡೋಪತಂಡವಾಗಿ ಪರಸ್ಪರ ಬಣ್ಣ ಮತ್ತು ಓಕಳಿ ಎರಚಿ ಸಂಭ್ರಮಿಸಿದರು. ಅದರಲ್ಲೂ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ(Shimogga)ದಲ್ಲಿ ಗಾಂಧಿಬಜಾರ್, ದುರ್ಗಿಗುಡಿ, ವಿನೋಬನಗರ, ನೆಹರು ರಸ್ತೆ ಒಳಗೊಂಡಂತೆ ಹಲವೆಡೆ ಬಣ್ಣದಾಟ ಭರ್ಜರಿಯಾಗಿತ್ತು. ಬೈಕ್, ಸ್ಕೂಟಿಗಳಲ್ಲಿ ಸ್ನೇಹಿತರು, ಪರಿಚಯಸ್ಥರೊಂದಿಗೆ ಪ್ಯಾಕೆಟ್‌ಗಳಲ್ಲಿ ವಿವಿಧ ಮಾದರಿ ಬಣ್ಣ ಹಚ್ಚಿ ಕಾಮಣ್ಣ(Kamanna)ನ ಹಬ್ಬದ ಶುಭಾಶಯ ಕೋರಿದರು. 
ದ್ವಿತೀಯ ಪಿಯು(Second pu) ಪರೀಕ್ಷೆ ಜ್ವರದ ನಡುವೆಯೂ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಬಡಾವಣೆಗಳು, ವೃತ್ತಗಳು, ಕಾಲೇಜುಗಳ ಬಳಿ ಬಣ್ಣದಾಟದ ಸಂಭ್ರಮ ಕಳೆಗಟ್ಟಿತ್ತು. ಮೈಗೆ ಬಣ್ಣ ಹಚ್ಚಿಕೊಂಡು ಯುವ ಸಮೂಹ ಅತಿ ವೇಗವಾಗಿ ವಾಹನ ಚಲಾಯಿಸಿದ್ದು ಕಂಡುಬಂದಿತು. ಇದೇ ವೇಳೆ ಕುಂಬಾರ ಬೀದಿ, ಕೂಡ್ಲಿ ಮಠ, ತುಳಜಾಭವಾನಿ ದೇವಾಲಯ, ಬಸವೇಶ್ವರ ದೇವಾಲಯ ಸೇರಿ ಹಲವೆಡೆ ಕಾಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದಹನ ಕೂಡ ಮಾಡಲಾಯಿತು. ಹೋಳಿ ಹಬ್ಬದ ಬಣ್ಣಗಳಿಂದ ಶಿವಮೊಗ್ಗ ನಗರ ರಂಗೇರಿತ್ತು.

ರೇನ್ ಡ್ಯಾನ್ಸ್.. ಡಿಜೆ ದರ್ಬಾರ್..

ಪ್ರತಿ ವರ್ಷದಂತೆ ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಟಿ.ಸೀನಪ್ಪ ಶೆಟ್ಟಿ ವೃತ್ತದಲ್ಲಿ ರೇನ್ ಡ್ಯಾನ್ಸ್(Rain Dance) ಹಾಗೂ ಡಿಜೆ ಮ್ಯೂಸಿಕ್(DJ Music) ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 9ರಿಂದಲೇ ಆರಂಭವಾದ ರಂಗಿನ ಓಕಳಿಯಲ್ಲಿ ಸಾವಿರಾರು ಯುವಕ-ಯುವತಿಯರು ಕುಣಿದು ಕುಪ್ಪಳಿಸಿದರು. ಪರಸ್ಪರ ಬಣ್ಣ ಎರಚಿಕೊಂಡು ಡಿಜೆ ಹಾಡುಗಳಿಗೆ ಸಾವಿರಾರು ಜನ ರೇನ್ ಡ್ಯಾನ್ಸ್ ಮಾಡಿದರು. ಸಾರ್ವಜನಿಕರಷ್ಟೇ ಅಲ್ಲದೆ, ಶಾಸಕ ಎಸ್.ಎನ್.ಚನ್ನಬಸಪ್ಪ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಬಿಜೆಪಿ ಹಾಗೂ ಕಾಂಗ್ರೆಸ್, ಜೆಡಿಎಸ್‌ನ ಮುಖಂಡರು ಕೂಡ ಹಾಡಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲೇ ‘ವಂದೇ ಮಾತರಂ’ ಗೀತೆ  ಮೂಲಕ ರಾಷ್ಟ್ರಕ್ಕೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net