ಶಿವಶರಣರ ವಚನಗಳಲ್ಲಿದೆ ಜೀವನ್ಮುಖಿ ಆಶಯ I sharana vachana

ಶಿವಮೊಗ್ಗದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿಯನ್ನು ಸಿ.ಎಸ್.ಚಂದ್ರಭೂಪಾಲ, ಡಾ. ಬಸವರಾಜ ನೆಲ್ಲಿಸರ ಉದ್ಘಾಟಿಸಿದರು. ಎಚ್.ಉಮೇಶ್, ಆರ್.ಪ್ರದೀಪ್ ಇದ್ದರು.
ಶಿವಮೊಗ್ಗದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿಯನ್ನು ಸಿ.ಎಸ್.ಚಂದ್ರಭೂಪಾಲ, ಡಾ. ಬಸವರಾಜ ನೆಲ್ಲಿಸರ ಉದ್ಘಾಟಿಸಿದರು. ಎಚ್.ಉಮೇಶ್, ಆರ್.ಪ್ರದೀಪ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ ಅಭಿಮತ
  • ಕಾಯಕ ಶರಣರ ಜಯಂತಿಯಲ್ಲಿ ಉಪನ್ಯಾಸ
ಶಿವಮೊಗ್ಗ : ಶರಣರು ಆಡಿದ ಮಾತುಗಳು, ನೀಡಿದ ವಚನಗಳು ಜೀವನ್ಮುಖಿಯಾಗಿವೆ. ಸಿನಿಮಾ, ಸೀರಿಯಲ್, ಮೊಬೈಲ್ (mobile) ವೀಕ್ಷಣೆ ಬದಲಿಗೆ ಶರಣ (sharana)ರ ವಚನ (vachana) ಸಾಹಿತ್ಯ ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಜವಾದ ಕಲ್ಯಾಣವಾಗುತ್ತದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ನೆಲ್ಲಿಸರ ಹೇಳಿದರು.
ಜಿಲ್ಲಾಡಳಿತದಿಂದ ಮಂಗಳವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಸವಣ್ಣ ಸೇರಿ ಎಲ್ಲ ಶರಣರು, ಎಲ್ಲ ಜಾತಿ, ಧರ್ಮಗಳು ಒಂದೇ ಎಂದು ಸಾರಿದ್ದರು. ಸಮಾಜದಲ್ಲಿ ತಾಂಡವವಾಡುತ್ತಿದ್ದ ಅನಿಷ್ಟ ಪದ್ಧತಿಗಳಿಗೆ ಚಾಟಿ ಬೀಸಿ, ಹೆಣ್ಣಿಗೆ ಗೌರವ ಮತ್ತು ಸಮಾನತೆ ನೀಡಬೇಕು, ಅಸ್ಪಶ್ಯತೆ ನಿವಾರಣೆ ಆಗಬೇಕೆಂದು ಬಯಸಿದ್ದರು ಎಂದು ತಿಳಿಸಿದರು.
ಕಾಯಕಕ್ಕೆ ಮತ್ತೊಂದು ಹೆಸರಾದ ಮಾದಾರ ಚನ್ನಯ್ಯ ಅವರು ಬಸವಣ್ಣ ಅವರಿಗಿಂತ ಹಿರಿಯರಾಗಿದ್ದು ಕುದುರೆ ಕಾಯುವ ಕಾಯಕದಲ್ಲಿ ತೊಡಗಿದ್ದರು. ಶರಣರಿಗೆ ಅಂಬಲಿ ಪ್ರಸಾದ ನೀಡುತ್ತ ಶಿವನನ್ನೇ ಒಲಿಸಿಕೊಂಡಿದ್ದರು. ಮಾದಾರ ದೂಳಯ್ಯ ತಮ್ಮ ಕಾಯಕದೊಂದಿಗೆ ಹಲವಾರು ವಚನ ರಚಿಸಿದ್ದಾರೆ. ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಸಹ ಕಾಯಕ ನಿಷ್ಠೆಗೆ ಹೆಸರಾಗಿದ್ದು, ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ನಿವಾರಣೆಗೆ ಕೊಡುಗೆ ನೀಡಿದ್ದಾರೆ ಎಂದರು.
ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಾಡು, ನೃತ್ಯ ಮತ್ತು ಉಪನ್ಯಾಸಗಳ ಮೂಲಕ ಕಾಯಕ ಶರಣರ, ದಾರ್ಶನಿಕರ ಬಗ್ಗೆ ತಿಳಿಸುವ ಪ್ರಯತ್ನವಾಗಬೇಕು. ಆಗ ಮುಂದಿನ ಪೀಳಿಗೆಗೆ ಶರಣರ ವಚನಗಳು, ತತ್ವಗಳನ್ನು ತಲುಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.


ಕಾಯಕದಿಂದ ಬಡತನ ದೂರ

ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕಾಯಕದಲ್ಲಿ ತೊಡಗಿದರೆ ಬಡತನವೇ ಇರುವುದಿಲ್ಲ ಎಂದು ಕಾಯಕ ಶರಣರು ತಮ್ಮ ನಡೆ-ನುಡಿ ಮೂಲಕ ಸಾರಿದ್ದಾರೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಅಭಿಪ್ರಾಯಪಟ್ಟರು. ಸಮಾಜದಲ್ಲಿ ಅಸಮಾನತೆ, ತಾರತಮ್ಯ ಮತ್ತು ಕೆಟ್ಟ ಸಂಪ್ರದಾಯಗಳನ್ನು ಹೋಗಲಾಡಿಸಲು ಕಾಯಕ ಶರಣರು ಹೋರಾಡಿದ್ದಾರೆ. 12ನೇ ಶತಮಾನದಿಂದ ನಡೆದು ಬಂದ ಶರಣರ ಕಾಯಕ ಸಂಸ್ಕೃತಿಯನ್ನು ಮುಂದುವರಿಸಬೇಕು ಎಂದರು. ದಾರ್ಶನಿಕರು, ಶರಣರು ಮತ್ತು ಮಹಾನ್ ವ್ಯಕ್ತಿಗಳ ತತ್ವಗಳು, ವಿಚಾರಗಳು ಮತ್ತು ಜೀವನ ಚರಿತ್ರೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಬೇಕು. ಆಗ ಮಕ್ಕಳು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ತಿಳಿದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
"

ವಚನಕಾರರು ಯಾವುದೇ ಒಂದು ಸಮುದಾಯಕ್ಕೆ ಮೀಸಲಾದವರಲ್ಲ. ಜಾತಿ ಮತ್ತು ಧರ್ಮಗಳನ್ನು ಮೀರಿದವರು. 12ನೇ ಶತಮಾನದ ವಚನ ಸಾಹಿತ್ಯ ಸಮುದ್ರವಿದ್ದಂತೆ. ಮಹೋನ್ನತ ವಿಚಾರಗಳು ಅದರಲ್ಲಿವೆ. ದಾರ್ಶನಿಕರ ಆಶಯಗಳು, ತತ್ವಗಳು, ವಿಚಾರಗಳು ಮುಂದಿನ ಪೀಳಿಗೆಗೆ ತಲುಪಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net