ಕುವೆಂಪು ಸಾಹಿತ್ಯದಲ್ಲಿದೆ ರಾಷ್ಟ್ರೀಯತೆ ಮಹತ್ವ | Kuvempu literature

ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಶಿವಮೊಗ್ಗ ಸಾಹಿತ್ಯ ಹಬ್ಬದ ಎರಡನೇ ದಿನದ ಗೋಷ್ಠಿಯಲ್ಲಿ ಸಮನ್ವಯಕಾರ ರೋಹಿತ್ ಚಕ್ರತೀರ್ಥ ಮಾತನಾಡಿದರು. ಡಾ. ಟಿ.ಎಲ್.ಪ್ರವೀಣ್, ಡಾ. ಅಶ್ವಿನಿ ದೇಸಾಯಿ ಇದ್ದರು.
ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ಶಿವಮೊಗ್ಗ ಸಾಹಿತ್ಯ ಹಬ್ಬದ ಎರಡನೇ ದಿನದ ಗೋಷ್ಠಿಯಲ್ಲಿ ಸಮನ್ವಯಕಾರ ರೋಹಿತ್ ಚಕ್ರತೀರ್ಥ ಮಾತನಾಡಿದರು. ಡಾ. ಟಿ.ಎಲ್.ಪ್ರವೀಣ್, ಡಾ. ಅಶ್ವಿನಿ ದೇಸಾಯಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಸಾಹಿತ್ಯ ಹಬ್ಬದ ಸಂಭ್ರಮ
  • ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆ ಸಮನ್ವಯತೆ ಗೋಷ್ಠಿ
  • ದಾವಣಗೆರೆ ವಿವಿ ಸಹಪ್ರಾಧ್ಯಾಪಕ ಡಾ. ಪ್ರವೀಣ್ ಅನಿಸಿಕೆ
ಶಿವಮೊಗ್ಗ: ಪಾಶ್ಚಾತ್ಯ ದೇಶ(Western country)ಗಳ ರಾಷ್ಟ್ರೀಯತೆಯಲ್ಲಿ ಜನಾಂಗ ಕಲ್ಪನೆ ಇದೆ. ಆದರೆ ಭಾರತದ ರಾಷ್ಟ್ರೀಯತೆ ಎಂಬುದು ಇಡೀ ಐಕ್ಯತೆ ಸತ್ವ, ಅಧ್ಯಾತ್ಮ, ಪರಂಪರೆ ಹಾಗೂ ಸಂಸ್ಕೃತಿ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ಸಾಹಿತ್ಯದಲ್ಲಿ ತೆರೆದಿಟ್ಟವರು ರಾಷ್ಟ್ರಕವಿ ಕುವೆಂಪು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಟಿ.ಎಲ್.ಪ್ರವೀಣ್ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್‌ನಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವೃತ್ತಿಯ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಭಾನುವಾರ ‘ಕುವೆಂಪು ಸಾಹಿತ್ಯ(Kuvempu literature)ದಲ್ಲಿ ರಾಷ್ಟ್ರೀಯತೆ ಹಾಗೂ ಪ್ರಾದೇಶಿಕತೆ ಸಮನ್ವಯತೆ’ ಕುರಿತು ಮಾತನಾಡಿ, ಮಿತಿಗಳನ್ನು ಮೀರಿದಾಗ ಉನ್ನತಿ ಸಾಧ್ಯ ಎಂದವರು ಕುವೆಂಪು. ಪ್ರಗತಿಪರರು ಕುವೆಂಪು ಅವರ ಹೆಸರು ಬಳಸಿ ಅವರ ವಿಚಾರವನ್ನು ಮಂಡಿಸುವ ಕಾರ್ಯವನ್ನು ಸದಾ ಮಾಡಿದರು. ಆದರೆ ಕುವೆಂಪು ಸಾಹಿತ್ಯದ ನೈಜತೆ ಮರೆಮಾಚಿದರು ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು ಅವರ ಸಾಹಿತ್ಯದಲ್ಲಿನ ರಾಷ್ಟ್ರೀಯತೆ ಮರೆಮಾಚಿದ್ದೇವೆ. ಭಾರತ, ಕರ್ನಾಟಕ ತದ್ವಿರುದ್ಧವಲ್ಲ, ತಾಯಿ-ಮಗಳ ಹಾಗೆ ಎಂಬುದನ್ನು ಕುವೆಂಪು ಅವರ ಸಾಹಿತ್ಯದಲ್ಲಿ ನೋಡಬಹುದು. ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಅಸ್ಮಿತೆಗೆ ಹೋರಾಟ ನಡೆಯುತ್ತಿದ್ದ ಕಾಲಘಟ್ಟ ಕುವೆಂಪು ಅವರದು ಎಂದರು.
ಭಾರತದ ಐಕ್ಯತೆ(Unity of India) ಅತ್ಯಂತ ಮುಖ್ಯ. ಕನ್ನಡಕ್ಕಾಗಿ ಕೈಎತ್ತಿ ಎಂದು ಹೇಳುವವರು ಮುಂದಿನದು ಭಾರತ ಎಂಬುದನ್ನು ಮರೆಯುತ್ತಿರುವುದು ಬೇಸರದ ಸಂಗತಿ. ಕನ್ನಡಿಗ, ಭಾರತೀಯ ಎಂಬ ವಿಷಯ ಮುಖಾಮುಖಿ ಮಾಡುವ ಸಂದರ್ಭವೇ ಇಲ್ಲ. ವಿಭಜಿಸುವ ತಂತ್ರ, ಅದು ಬಾಲಿಶವಾದುದು. ವೇದ, ಉಪನಿಷತ್‌ಗಳ ಮೂಲಕ ನಾವು ಈವರೆಗೂ ಐಕ್ಯತೆ ಸಾಧಿಸುತ್ತ ಬಂದಿದ್ದೇವೆ. ಅದರ ಮೂಲಕ ನಾವು ಸಾಗಬೇಕು ಎಂದು ಹೇಳಿದರು.

ಕುವೆಂಪು ಅವರದು ಭಾರತ ಒಗ್ಗೂಡಿಸುವ ಕಾಲಘಟ್ಟ

ಕುವೆಂಪು ಅವರದು ಭಾರತ ಒಗ್ಗೂಡಿಸುವ ಕಾಲಘಟ್ಟ. ಯುರೋಪಿಯನ್(European), ಕಲೋನಿಯಲ್ ವಿಚಾರ ತಿರಸ್ಕರಿಸಿ ಭಾರತದ ರಾಷ್ಟ್ರೀಯತೆ ಮುಂದಿಡುವ ಪ್ರಯತ್ನವನ್ನು ಕುವೆಂಪು ಹಾಗೂ ಮಾಸ್ತಿ ಅವರು ಮಾಡಿದರು ಎಂದು ಬೆಂಗಳೂರು ವಿವಿ ಸಹಪ್ರಾಧ್ಯಾಪಕಿ ಡಾ. ಅಶ್ವಿನಿ ದೇಸಾಯಿ ತಿಳಿಸಿದರು.
ರಾಷ್ಟ್ರೀಯತೆ ಕಲ್ಪನೆ ತಿಳಿಸುವ ಕೆಲಸ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಾಹಿತಿಗಳಿಗಿತ್ತು. ಅಜ್ಞಾನ ತೊರೆದು ಜ್ಞಾನದೆಡೆಗೆ ಸಾಗಿ ಎಂಬುದು ಕುವೆಂಪು ಸಾಹಿತ್ಯದಲ್ಲಿದೆ. ಸಂಸ್ಕೃತಿ ಹಿನ್ನೆಲೆಯ ದೃಷ್ಟಿಯಲ್ಲಿ ರಾಷ್ಟ್ರೀಯತೆ ಕಟ್ಟಿಕೊಳ್ಳಲು ಕುವೆಂಪು ಸಾಹಿತ್ಯ ಓದಬೇಕು ಎಂದರು. ಸಮನ್ವಯಕಾರ ರೋಹಿತ್ ಚಕ್ರತೀರ್ಥ ಇದ್ದರು.
"

ರಾಷ್ಟ್ರೀಯ ಹಾಗೂ ಸಂಸ್ಕೃತಿ ಪ್ರಜ್ಞೆಯನ್ನು ಕುವೆಂಪು ಅವರು ಸಾಹಿತ್ಯದಲ್ಲಿ ತೋರಿಸಿದರು. ರಾಷ್ಟ್ರೀಯತೆ ಹಾಗೂ ಕನ್ನಡದ ಮೇಲಿನ ಅವರ ಪ್ರೇಮವನ್ನು ವೈರುದ್ಧವಾಗಿ ಪ್ರದರ್ಶಿಸಲಾಗಿದೆ. ವ್ಯವಸ್ಥಿತವಾಗಿ ಅದನ್ನು ಮುಗಿಸಲಾಗಿದೆ. ಭಾರತೀಯ ಸಂಸ್ಕೃತಿಯ ಚಿತ್ರಣವನ್ನು ಕುವೆಂಪು ಅವರ ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅದನ್ನೇ ಅವರು ರಾಷ್ಟ್ರೀಯತೆ ಎಂದಿರಬಹುದು.

— ಡಾ. ಅಶ್ವಿನಿ ದೇಸಾಯಿ, ಬೆಂಗಳೂರು ವಿವಿ ಸಹಪ್ರಾಧ್ಯಾಪಕಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net