ಸೊರಬ: ಜಡೆ ಸಂಸ್ಥಾನ ಮಠವೂ ಅನಾದಿ ಕಾಲದಿಂದಲೂ ಸಮಾಜದಲ್ಲಿ ಭಕ್ತರ ನಡುವೆ ಅವಿನಾಭಾವ ಸಂಬಂಧ ಹೊಂದಿ ಬೆಳೆದು ಬಂದಿದೆ. ಈ ಪರಂಪರೆ ಹೀಗೆ ಮುಂದುವರಿಯಲಿ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಜಡೆ ಸಂಸ್ಥಾನ ಮಠಕ್ಕೆ ಸೋಮವಾರ ಭೇಟಿ ನೀಡಿ ಆಶೀರ್ವಚನ ನೀಡಿದ ಅವರು, ಜಡೆ ಸಂಸ್ಥಾನ ಮಠವು ಕೆಳದಿ ಅರಸರ ಕಾಲದಿಂದ 400 ವರ್ಷಗಳ ಇತಿಹಾಸ ಹೊಂದಿದೆ. ಭಕ್ತರು ಮತ್ತು ಮಠದ ನಡುವೆ ಸೌಹಾರ್ದ, ಸಾಮರಸ್ಯದ ಸಂಬಂಧ ಇಟ್ಟುಕೊಂಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿದ್ಯೆ, ಅನ್ನ, ಅರಿವು, ಅಕ್ಷರ, ಸಮಾಜ ಸೇವಾ ಕಾರ್ಯ ಈ ಮಠದಿಂದ ಮುಂದುವರಿಯಲಿ. ಮಠದ ಆರಂಭದ ಕಾಲದಿಂದಲೂ ತಮ್ಮದೇ ಆದ ಧಾರ್ಮಿಕ ಕೊಡುಗೆ ನೀಡಿದ ಸ್ವಾಮೀಜಿಗಳ ಮತ್ತು ಈ ಮಠ ಬೆಳೆದು ಬಂದ ಬಗೆಯನ್ನು ತಿಳಿದು ಸಂತೃಪ್ತಿ ಉಂಟಾಗಿದೆ. ದೈವಾನುಗ್ರಹದಿಂದ ಭಕ್ತರಿಗೆ ಸದ್ಗತಿ ಉಂಟಾಗಲಿ ಎಂದರು.
ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಶೃಂಗೇರಿ ಮಠದ ಶ್ರೀಗಳು ನಮ್ಮ ಮಠಕ್ಕೆ ಭೇಟಿ ನೀಡಿರುವುದು ಅತ್ಯಂತ ಸಂತಸ ತಂದಿದೆ. ಶ್ರೀಗಳ ಆಶೀರ್ವಚನ ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆ ಬೆಳೆಸಲಿ ಎಂದು ಆಶಿಸಿದರು.