ಸಾಗರದಲ್ಲಿ ಪರಿಣಿತಿ ಕಲಾಕೇಂದ್ರ ಆಯೋಜಿಸಿದ್ದ ರಾಷ್ಟ್ರೀಯ ನೃತ್ಯ ಸಂಗೀತ ಜಾನಪದೋತ್ಸವ ಕಾರ್ಯಕ್ರಮವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಉದ್ಘಾಟಿಸಿದರು. ವೈ.ಎ.ದಂತಿ, ನಾಗರಾಜ ಪೈ, ವೀಣಾ ಬೆಳೆಯೂರು, ಟಿ.ವಿ.ಪಾಂಡುರಂಗ ಇತರರಿದ್ದರು.
ಸಾಗರ: ಕಲೆ, ಸಾಹಿತ್ಯ, ಸಂಸ್ಕೃತಿ ಊರಿನ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ಜಾನಪದ ಕಲೆಗಳ ಉಳಿವಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಅಭಿಪ್ರಾಯಪಟ್ಟರು.
ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಪರಿಣಿತಿ ಕಲಾಕೇಂದ್ರದಿಂದ ಆಯೋಜಿಸಿದ್ದ 11ನೇ ರಾಷ್ಟ್ರೀಯ ನೃತ್ಯ ಸಂಗೀತ ಜಾನಪದೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊಸ ಹೊಸ ಕಲಾವಿದರು ನೃತ್ಯ, ಸಂಗೀತ ಕ್ಷೇತ್ರಕ್ಕೆ ಬರಬೇಕು. ಪರಿಣಿತಿ ಕಲಾಕೇಂದ್ರ ಹೊಸ ಪೀಳಿಗೆಯನ್ನು ನೃತ್ಯಕ್ಷೇತ್ರಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಹೊಸ ನೀರು ಹರಿಯುತ್ತಿದ್ದಾಗ ಹೊಸಹೊಸ ಕಲಾ ಪ್ರಕಾರಗಳು ಅಭಿವ್ಯಕ್ತಗೊಳ್ಳುತ್ತವೆ. ಹೊರರಾಜ್ಯದ ಕಲಾವಿದರು ಬಂದು ತಮ್ಮ ರಾಜ್ಯದ ಕಲೆಗಳನ್ನು ಪ್ರದರ್ಶನ ಮಾಡಿದಾಗ ಸ್ಥಳೀಯರು ಅದರ ಬಗ್ಗೆ ಕಲಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸಾಗರದಲ್ಲಿ ದಾನಿಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತ್ತ ಬಂದಿದ್ದಾರೆ. ಪರಿಣಿತಿ ಕಲಾಕೇಂದ್ರ ದಶಕಗಳಿಂದಲೂ ವೈವಿಧ್ಯಮಯ ಕಾರ್ಯಕ್ರಮ ನಡೆಸುವ ಜತೆಗೆ ಕಲಾಪೋಷಕರನ್ನು ಗೌರವಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೈ.ಎ.ದಂತಿ, ಇಂತಹ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಪ್ರಸರಿಸುವ ಕೆಲಸ ಮಾಡುತ್ತವೆ. ವಿದ್ವಾನ್ ಗೋಪಾಲ್ ಮತ್ತು ತಂಡದವರು ಅತ್ಯುತ್ತಮವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತ ಬಂದಿದ್ದಾರೆ. ಭರತನಾಟ್ಯ, ಜಾನಪದ ನೃತ್ಯದಂತಹ ಪ್ರಕಾರಗಳನ್ನು ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಎಂದರು.
ವೈ.ಎ.ದಂತಿ ಮತ್ತು ಶಾಂತಾ ದಂತಿ, ನಾಗರಾಜ ಪೈ ಮತ್ತು ಮೋನಾ ಪೈ ಅವರಿಗೆ ಪರಿಣಿತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀಣಾ ಬೆಳೆಯೂರು, ಟಿ.ವಿ.ಪಾಂಡುರಂಗ, ಸುಂದರ ಭಾಸ್ಕರ್, ಟಿ.ಡಿ.ಮೇಘರಾಜ್, ಸೋಮಶೇಖರ್, ಮಮತಾ ಅರುಣಕುಮಾರ್, ವಿದ್ವಾನ್ ಎಂ.ಗೋಪಾಲ್, ಕುಂಸಿ ಉದಯಕುಮಾರ್, ಶ್ವೇತಾ ಗೋಪಾಲ್ ಇತರರಿದ್ದರು.