ಸರ್ಕಾರಕ್ಕೆ ದಲ್ಲಾಳಿಗಳ ಹಿತವೇ ಮುಖ್ಯ! | Purchasing center

ಸೊರಬದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹರತಾಳು ಹಾಲಪ್ಪ ಎತ್ತಿನಗಾಡಿ ಏರಿ ಮೆರವಣಿಗೆ ನಡೆಸಿದರು. ಪ್ರಕಾಶ್ ಅಗಸನಹಳ್ಳಿ, ಸುರೇಶ್, ಜಾನಕಪ್ಪ, ಟಿ.ಡಿ.ಮೇಘರಾಜ್, ಸಿದ್ದಲಿಂಗಪ್ಪ ಇತರರಿದ್ದರು
ಸೊರಬದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಹರತಾಳು ಹಾಲಪ್ಪ ಎತ್ತಿನಗಾಡಿ ಏರಿ ಮೆರವಣಿಗೆ ನಡೆಸಿದರು. ಪ್ರಕಾಶ್ ಅಗಸನಹಳ್ಳಿ, ಸುರೇಶ್, ಜಾನಕಪ್ಪ, ಟಿ.ಡಿ.ಮೇಘರಾಜ್, ಸಿದ್ದಲಿಂಗಪ್ಪ ಇತರರಿದ್ದರು
Published on
ಸೊರಬ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸದ ಹಾಗೂ ಖರೀದಿ ಕೇಂದ್ರ ತೆರೆಯದೇ ಇರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಪಟ್ಟಣದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದ ವಿಳಂಬ ನೀತಿ ಹಾಗೂ ಅಧಿಕಾರಿಗಳ ಕುತಂತ್ರದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಂದ ವ್ಯಾಪಾರಿಗಳು ಬೆಳೆ ಖರೀದಿಸಿದ ಮೇಲೆ ಎಪಿಎಂಸಿಯಲ್ಲಿ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ರೈತರ ಹೆಸರಿನಲ್ಲಿ ದಲ್ಲಾಳಿಗಳು ಖರೀದಿ ಕೇಂದ್ರಕ್ಕೆ ಮಾರಾಟ ಮಾಡುವ ಮೂಲಕ ಲಾಭ ಪಡೆಯುತ್ತಾರೆ. ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಖರೀದಿ ಕೇಂದ್ರ ತೆರೆಯುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಾಲಿಗೆ ಮೇಲೆ ಹಿಡಿತವಿಲ್ಲದೆ ಹಿರಿಯ ಶಾಸಕ ಜ್ಞಾನೇಂದ್ರ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಜ್ಞಾನೇಂದ್ರ ಅವರ ಅನುಭವವೇನು ಏನು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಡಾ. ರಾಜಕುಮಾರ್ ಅವರ ಸೊಸೆಯನ್ನು ಚುನಾವಣೆಯಲ್ಲಿ ನಿಲ್ಲಿಸಿ ಅವರ ಕುಟುಂಬದ  ಮಾನ, ಮಾರ್ಯಾದೆ ಹಾಳುಮಾಡಿದ್ದಾರೆ. ಅವರೇ ಸ್ವತಃ ಎಂಟು ಬಾರಿ ಚುನಾವಣೆಗೆ ಸ್ಪರ್ಧಿಸಿ ಕೇವಲ ಎರಡು ಬಾರಿ ಗೆದ್ದಿದ್ದಾರೆ. ಜನರು ನೀಡಿರುವ ಅಧಿಕಾರವನ್ನು ಅಭಿವೃದ್ಧಿಗೆ ಬಳಸುವುದನ್ನು ಬಿಟ್ಟು ಬೇರೆಯವರ ಬಗ್ಗೆ ಮಾತಾಡುವುದನ್ನು ಬಿಡಬೇಕು ಎಂದು ಪ್ರತಿಕ್ರಿಯಿಸಿದರು.
ಮೂರನೇ ತರಗತಿ ಪಠ್ಯದ ಭಾಗ ಒಂದರಲ್ಲಿ ಮೊದಲ ಅವಧಿಗೆ ಇಟ್ಟಿದ್ದ ವಿಷಯವನ್ನೇ ಮರು ಮುದ್ರಿಸಲಾಗಿದೆ. ಇದನ್ನು  ತಿಳಿದುಕೊಂಡಿದ್ದಾರೆಯೇ? ಇದರಿಂದ ಆಗಿರುವ ಪ್ರಮಾದ ಎಂಥದ್ದು ಎಂಬ ಕನಿಷ್ಠ ಜ್ಞಾನವಿಲ್ಲದ ಸಚಿವರು ಶಿಕ್ಷಣ ಇಲಾಖೆಯಲ್ಲಿ ಯಾವ ಸುಧಾರಣೆ ಮಾಡಿದ್ದೀರಿ ಎಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ತಾಲೂಕು ಉಪಾಧ್ಯಕ್ಷ ಡಾ. ಜ್ಞಾನೇಶ್ ಮಾತನಾಡಿ, ರಸ್ತೆ, ಗುಂಡಿಗಳನ್ನು ಮುಚ್ಚಲು ಅಸಮರ್ಥವಾಗಿರುವ ಸರ್ಕಾರ ಇದೀಗ ರೈತ ವಿರೋಧಿ ನೀತಿ ಅನುಸರಿಸುತ್ತದೆ. ಅಡಕೆಗೆ ಎಲೆಚುಕ್ಕೆ ರೋಗ ಬಾಧಿಸುತ್ತಿದೆ. ಅತಿವೃಷ್ಟಿಯಿಂದ ಬೆಳೆಹಾನಿ ಆಗಿದ್ದರೂ ರೈತರಿಗೆ ಪರಿಹಾರ ನೀಡಲು ಮುಂದಾಗಿಲ್ಲ, ಕ್ಷೇತ್ರದಲ್ಲಿ ಶಾಸಕರಿದ್ದಾರೆ ಎನ್ನುವುದೇ ಜನರಲ್ಲಿ ಅನುಮಾನ ಮೂಡಿದೆ ಎಂದು ಟೀಕಿಸಿದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಪ್ರಮುಖರಾದ ಸುರೇಶ್, ಜಾನಕಪ್ಪ, ಟಿ.ಡಿ.ಮೇಘರಾಜ್, ಸಿದ್ದಲಿಂಗಪ್ಪ, ಮಧುರಾಯ್ ಶೇಟ್, ಜಗದೀಶ್, ವಿಜಯೇಂದ್ರ ಗೌಡ, ಗುರುಪ್ರಸನ್ನ ಗೌಡ, ಗೀತಾ ಮಲ್ಲಿಕಾರ್ಜುನ, ಪಾಣಿ ರಾಜಪ್ಪ, ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ಶಿವಕುಮಾರ್, ದೇವೇಂದ್ರಪ್ಪ, ಯೋಗೆಶ್, ಈಶ್ವರ, ಹೊಳಿಯಮ್ಮ  ಇತರಿದ್ದರು.

ಮಾತನಾಡುವಾಗ ವಿವೇಕವಿರಲಿ

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಿಜೆಪಿಯ ಕೂಸು ಎಂದು ಪ್ರತಿ ಮಾತಿಗೂ ಮಧು ಬಂಗಾರಪ್ಪ ದೂರುತ್ತಾರೆ. ಶರಾವತಿ   ಸಮಸ್ಯೆ ಹುಟ್ಟಿದ್ದು 1965ರಲ್ಲಿ. ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರಿಂದಲೂ ಬಗೆಹರಿಸಲಾಗಿಲ್ಲ. ಈ ಸಮಸ್ಯೆ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬಗ್ಗೆ ವಿವೇಕವಿಲ್ಲದೆ ಮಾತನಾಡುತ್ತಾರೆ. ಯಾವುದೇ ವಿಷಯದ ಬಗ್ಗೆ ಮಾತನಾಡಲು ಮುನ್ನ ಆಳವಾಗಿ ಅಧ್ಯಯನ ಮಾಡುವುದನ್ನು ಕಲಿಯಬೇಕು. ಅರೆಬರೆ ಶಿಕ್ಷಣ ಕಲಿತವರಿಗೆ ಜ್ಞಾನ ಎಲ್ಲಿಂದ ಬರಬೇಕು ಎಂದು ಲೇವಡಿ ಮಾಡಿದರು.
"

ತಾಲೂಕಿನ ತಾಳಗುಪ್ಪ ಬಗರ್‌ಹುಕುಂ ರೈತರನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ. ಅಧಿಕಾರ ಸಿಕ್ಕರೆ ಜಮೀನು ಕೊಡಿಸುವುದಾಗಿ ಪ್ರಚಾರ ಮಾಡಿದ್ದಿರಿ. ಈಗ ನೀವು ಮಂತ್ರಿಯಾಗಿ ಜಮೀನು ಬಿಡಿಸಿಕೊಟ್ಟಿದ್ದೀರಾ? ಮಡಸೂರು ರೈತರನ್ನು ಜೈಲಿಗೆ ಕಳುಹಿಸುವಲ್ಲಿ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಪಾತ್ರವಿದೆ. ಬಡ ರೈತರಿಗೆ ತೊಂದರೆ ಕೊಟ್ಟಿದ್ದೇ ಇವರ ಸಾಧನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net