ತೀರ್ಥಹಳ್ಳಿ: ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಕುಟುಂಬದ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಒತ್ತಾಯಿಸಿದರು.
ತೀರ್ಥಹಳ್ಳಿ ತಾಲೂಕಿನ ಕಡಗೋಡು ಗ್ರಾಮದ ಸರ್ವೇ ನಂ.48 ಹಾಗೂ 51ರಲ್ಲಿ ಹಲವಾರು ವರ್ಷಗಳಿಂದ ಕೋಣಂದೂರು ಲಿಂಗಪ್ಪ ಅವರ ಕುಟುಂಬದ ಸ್ವಾಧೀನದಲ್ಲಿರುವ 8.12 ಎಕರೆ ಜಮೀನಿಗೆ ಅರಣ್ಯ ಇಲಾಖೆ ಸಿಬ್ಬಂದಿ ಟ್ರೆಂಚ್ ಹೊಡೆದಿದ್ದಾರೆ. ಕೂಡಲೇ ಟ್ರೆಂಚ್‌ಗಳನ್ನು ಮುಚ್ಚಬೇಕು. ಒಬ್ಬ ಮಾಜಿ ಶಾಸಕರ ಕುಟುಂಬದ ಮೇಲೆ ನಡೆದಿರುವ ಈ ದೌರ್ಜನ್ಯದ ಬಗ್ಗೆ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಕೂಡಾ ಚಕಾರ ಎತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಲಿಂಗಪ್ಪ ಅವರ ಕುಟುಂದ ಸ್ವ ಅನುಭವದಲ್ಲಿ ಇರುವ ಭೂಮಿ ಕರ್ನಾಟಕ ಭೂ ಕಂದಾಯ ಕಾಯ್ದೆ ಪ್ರಕಾರ 1960ರಲ್ಲಿ ಸಕ್ರಮವಾಗಿ ಪೋಡಿ ಆಗಿದೆ. ಆದರೆ ಈ ಬೆಳವಣಿಗೆಯನ್ನು ಗಮನಿಸಿದರೆ ಮಂಜೂರು ಭೂಮಿಯೂ ಸುರಕ್ಷಿತವಲ್ಲ ಎಂಬ ಆತಂಕ ಎದುರಾಗಿದೆ. ತಾಲೂಕಿನಲ್ಲಿ 17 ಸಾವಿರ ಎಕರೆ ಭೂಮಿಯನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಸರ್ಕಾರ ರೈತರ ಭೂಮಿ ರಕ್ಷಣೆಗೆ ಮುಂದಾಗಬೇಕಿದೆ. ಸುಪ್ರೀಂ ಕೋರ್ಟ್‌ನ ಆದೇಶದ ನೆಪದಲ್ಲಿ ಹಣಕ್ಕಾಗಿ ಅರಣ್ಯ ಇಲಾಖೆಯವರು ರೈತರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.