ಮಳೆ ಬಂದರೆ ಕತ್ತಲೆಯ ಭೀತಿ!

ತುಮರಿ ಸಮೀಪ ಅಕೇಶಿಯಾ ಮರ ವಿದ್ಯುತ್​ ತಂತಿ ಮೇಲೆ ಬಿದ್ದಿರುವುದು.
ತುಮರಿ ಸಮೀಪ ಅಕೇಶಿಯಾ ಮರ ವಿದ್ಯುತ್​ ತಂತಿ ಮೇಲೆ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕರೂರು ಹೋಬಳಿ ಜನತೆಗೆ ಮರಗಳೇ ದುಸ್ವಪ್ನ
  • 161 ವೃಕ್ಷಗಳ ಕಡಿತಲೆಗೆ ಅನುಮತಿ
  • ಮಳೆ ಬಂದರೆ ಕತ್ತಲೆಯ ಭೀತಿ!
ತುಮರಿ: ಮಳೆಗಾಲ ಬಂತೆಂದರೆ ಕರೂರು ಹೋಬಳಿಯ ಜನರಿಗೆ ಕತ್ತಲೆಯ ಭೀತಿ ಆವರಿಸುತ್ತದೆ. ಹುಲಿಕಲ್​ನಿಂದ ತುಮರಿವರೆಗಿನ ದಟ್ಟ ಕಾಡು, ದೊಡ್ಡ ದೊಡ್ಡ ಮರಗಳು ಮಲೆನಾಡಿನ ಸೌಂದರ್ಯವನ್ನು ಹೆಚ್ಚಿಸಿವೆ. ಆದರೆ ಕೆಲವು ಕಾಡುಜಾತಿಯ ಮತ್ತು ಅಕೇಶಿಯಾ ಮರಗಳು ಆತಂಕಕ್ಕೆ ಕಾರಣವಾಗಿವೆ.
ಸಣ್ಣ ಗಾಳಿ, ಮಳೆ ಬಂದರೂ ಈ ಮರಗಳು ವಿದ್ಯುತ್​ ತಂತಿಗಳ ಮೇಲೆ ಬೀಳುತ್ತಿರುವುದರಿಂದ ವಾರಗಟ್ಟಲೆ ಇಡೀ ಹೋಬಳಿಯಲ್ಲಿ ಕತ್ತಲು ಆವರಿಸುತ್ತದೆ. ಕಳೆದ ವಾರ ಗಾಳಿ ಸಹಿತ ಮಳೆಯಿಂದ ಮರಗಳು ಬಿದ್ದು ಸತತ ಏಳು ದಿನಗಳ ಕಾಲ ವಿದ್ಯುತ್​ ಸಂಪೂರ್ಣ ಕಡಿತವಾಗಿತ್ತು. ಆಸ್ಪತ್ರೆಗಳು, ಕುಡಿಯುವ ನೀರು, ಬ್ಯಾಂಕಿಂಗ್​, ಇಂರ್ಟನೆಟ್​ ಮತ್ತಿತರ ಅಗತ್ಯ ಸೇವೆಗಳು ಸ್ಥಗಿತವಾಗಿ ಸಾರ್ವಜನಿಕರು ಪರದಾಡಿದರು.
ಅಪಾಯಕಾರಿ ಮರಗಳು ಲೆಕ್ಕವಿಲ್ಲದಷ್ಟು ಇದ್ದರೂ 161 ಮರಗಳ ಕಟಾವಿಗೆ ಗುತ್ತಿಗೆ ನೀಡಲಾಗಿದೆ. ಅಲ್ಪ ಸ್ವಲ್ಪ ಮರ ಕಡಿತಲೆ ಗುತ್ತಿಗೆ ಪ್ರಕ್ರಿಯೆ ಮುಗಿದು ತಿಂಗಳು ಕಳೆಯುತ್ತ ಬಂದರೂ ಹೆದ್ದಾರಿ ಬದಿಯ ಒಂದೇ ಒಂದು ಮರವೂ ಕಟಾವಾಗಿಲ್ಲ.
ಮೆಸ್ಕಾಂ, ಅರಣ್ಯ ಇಲಾಖೆ ಹಗ್ಗಜಗ್ಗಾಟ: 
ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ವಿಷಯದಲ್ಲಿ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ನಡುವಿನ ಶೀತಲ ಸಮರದಲ್ಲಿ ಸಾರ್ವಜನಿಕರು ಬಸವಳಿದಿದ್ದಾರೆ. ಮಳೆಗಾಲದಲ್ಲಿ ವಿದ್ಯುತ್​ ತಂತಿ ಮೇಲೆ ಮರ ಬಿದ್ದು ನೂರಾರು ಹಳ್ಳಿಗಳು ಕತ್ತಲಲ್ಲಿ ಮುಳುಗಿದಾಗ ಅರಣ್ಯ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಸುಳಿಯುವುದಿಲ್ಲ. ಆದರೆ ಅಪಾಯ ತಪ್ಪಿಸಲು ಸಾರ್ವಜನಿಕರು ಅಥವಾ ಮೆಸ್ಕಾಂ ಸಿಬ್ಬಂದಿ ಮರ ಮುಟ್ಟಿದರೆ ಪ್ರಕರಣ ದಾಖಲಿಸಲು ಓಡೋಡಿ ಬರುತ್ತಾರೆ.
ಕಳೆದ ಬೇಸಿಗೆಯಲ್ಲಿ ಪ್ರತಿ ಬುಧವಾರ ಬ್ಯಾಕೋಡಿಗೆ ಬರುವ 33 ಕೆವಿ ವಿದ್ಯುತ್​ ಮಾರ್ಗದ ನಿರ್ವಹಣೆಗಾಗಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್​ ಕಡಿತಗೊಳಿಸಲಾಗುತ್ತಿತ್ತು. ಆದರೆ ಅಷ್ಟು ಸುದೀರ್ ಅವಧಿಯಲ್ಲಿ ಅಧಿಕಾರಿಗಳು ಮಾಡಿದ ನಿರ್ವಹಣೆ ಏನು? ಅದರ ಮಾಹಿತಿಯನ್ನೇಕೆ ಸಾರ್ವಜನಿಕರಿಗೆ ನೀಡಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ನಿರ್ವಹಣೆಯಲ್ಲಿ ಭಾರಿ ಲೋಪ ನಡೆದಿರುವುದು ಗೊತ್ತಾಗುತ್ತಿದೆ. ನಗರದಿಂದ ಬ್ಯಾಕೋಡು&ತುಮರಿವರೆಗಿನ ರಸ್ತೆ ಬದಿಯ ಎಲ್ಲ ಅಪಾಯಕಾರಿ ಅಕೇಶಿಯಾ ಹಾಗೂ ಕಾಡು ಜಾತಿಯ ಮರಗಳನ್ನು ತೆರವುಗೊಳಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಬಿಜೆಪಿ ಪ್ರತಿಭಟನೆಯಿಂದಾಗಿ ಟೆಂಡರ್​
ಸಮಸ್ಯೆಗೆ ಶಾಶ್ವತ ಪರಿಹಾರ ಕೋರಿ ಮಳೆಗಾಲದ ಪೂರ್ವದಲ್ಲಿಯೇ ತುಮರಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಧಿಕಾರಿಗಳು ಸಾರ್ವಜನಿಕರ ಅಸಮಾಧಾನ ಕಡಿಮೆ ಮಾಡಿಸಲು ನೆಪಮಾತ್ರಕ್ಕೆ 161 ಮರಗಳ ಕಡಿತಲೆಗೆ ಗುತ್ತಿಗೆ ನೀಡಿದ್ದಾರೆ. ಬ್ಯಾಕೋಡು ಗ್ರಿಡ್​ನಿಂದ ತುಮರಿಯವರೆಗೆ ವಿದ್ಯುತ್​ ಮಾರ್ಗಕ್ಕೆ ತೊಂದರೆ ಆಗುವಂತಹ ಸಾವಿರಕ್ಕೂ ಅಧಿಕ ಮರಗಳಿವೆ. ಆದರೆ ಇಲ್ಲಿಯ ಮರಗಳನ್ನು ಬಿಟ್ಟು ಬೇರೆ ಮರಗಳನ್ನು ಕಡಿತಲೆ ಮಾಡಲು ಟೆಂಡರ್​ ಕರೆಯಲಾಗಿದೆ ಎನ್ನಲಾಗಿದೆ. ಗ್ರಾಮೀಣ ಭಾಗದಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ನಡೆಸಿ ಕರೂರು, ಬಾರಂಗಿ ಹೋಬಳಿಯ ಗ್ರಾಮಗಳ ಜನರಿಂದ ಅಹವಾಲು ಸ್ವೀಕರಿಸಬೇಕು. ಕಾಗದದ ಮೇಲಿನ ಆದೇಶವನ್ನು ಬಿಟ್ಟು ಜಿಲ್ಲಾಡಳಿತ ತಣವೇ ಕಾರ್ಯಪ್ರವೃತ್ತರಾಗದಿದ್ದರೆ ಹಾಗೂ ಗುಣಮಟ್ಟದ ವಿದ್ಯುತ್​ ಕಲ್ಪಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
33 ಕೆವಿ ಮಾರ್ಗದ ನಿರ್ವಹಣೆಗಾಗಿ ಟೆಂಡರ್​ ನೀಡಲಾಗಿತ್ತು. ಆದರೆ ಸರಿಯಾದ ನಿರ್ವಹಣೆ ಮಾಡದ ಕಾರಣ ಪ್ರಸ್ತುತ ಗುತ್ತಿಗೆದಾರರನ್ನು ರದ್ದುಗೊಳಿಸಿ ಈಗ ಮತ್ತೆ ಮರು ಟೆಂಡರ್​ ಕರೆಯಲಾಗಿದೆ. 33 ಕೆವಿ ಪಕ್ಕದಲ್ಲಿ ಇರುವ ಅಪಾಯಕಾರಿ ಮರಗಳನ್ನು ತೆರವು ಮಾಡಲು 2003ರಿಂದ ಪ್ರತಿ ವರ್ಷವೂ ಪದೇಪದೆ ಅರ್ಜಿ ನೀಡುತ್ತಲೇ ಬಂದಿದ್ದೇವೆ. ಆದರೆ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ.
> ಚಂದ್ರಶೇಖರ್​, ಮೆಸ್ಕಾಂ ಕಾರ್ಯಪಾಲಕ ಅಭಿಯಂತ, ಸಾಗರ
ಮೆಸ್ಕಾಂ ಅಧಿಕಾರಿಗಳು ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರಗಳ ಕಡಿತಲೆಗೆ ಸಂಬಂಧಿಸಿ ಕಾರ್ಗಲ್​ ವಲಯಕ್ಕೆ 2026ರ ಮೇ ವರೆಗೂ ಯಾವುದೇ ಮಾಹಿತಿ ನೀಡಿರಲಿಲ್ಲ. ಮೇ ಕೊನೆಯ ವಾರದಲ್ಲಿ ನೀಡಿದ ಮಾಹಿತಿ ಮೇರೆಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗಿದೆ. ಆದರೆ ಮಳೆಗಾಲ ಆರಂಭವಾಗಿದ್ದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಬಾಕಿ ಇರುವ ಮರಗಳ ಕಡಿತಲೆಗೆ ಶಿಫಾರಸು ಮಾಡಲಾಗುವುದು.
> ರಾವೇಂದ್ರ, ಕಾರ್ಗಲ್​ ವಲಯ ಅರಣ್ಯ ಅಧಿಕಾರಿ
ಬ್ಯಾಕೋಡು ಗ್ರಿಡ್​ನಿಂದ ಹೊರಹೋಗುವ 11 ಕೆವಿ ಮಾರ್ಗದಲ್ಲಿ ಅಪಾಯಕಾರಿ ಮರಗಳ ಕಡಿತಲೆಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಆದರೆ ವಿದ್ಯುತ್​ ತಂತಿಯ ಪಕ್ಕದಲ್ಲಿರುವ ಮರಗಳನ್ನು ಮಾತ್ರ ಅರಣ್ಯ ಇಲಾಖೆ ಪರಿಗಣಿಸುತ್ತಿದೆ. ತಂತಿಯ ಕಡೆಗೆ ವಾಲಿರುವ ಮರಗಳನ್ನು ಕಡಿತಲೆ ಮಾಡಲು ಕ್ರಮ ಕೈಗೊಂಡರೆ ಕರೂರು ಹೋಬಳಿಗೆ ಮಳೆಗಾಲದಲ್ಲಿ ಸಮರ್ಪಕ ವಿದ್ಯುತ್​ ಒದಗಿಸಬಹುದು.
> ಶ್ರೀಧರ್​
ಮೆಸ್ಕಾಂ ಕಿರಿಯ ಅಭಿಯಂತ, ಬ್ಯಾಕೋಡು ವಿಭಾಗ
33 ಕೆವಿ ವಿದ್ಯುತ್​ ಸ್ಥಾವರದ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ಮಾರ್ಗ ನಿರ್ವಹಣೆ, ಜಂಗಲ್​ ಕಟಿಂಗ್​ ಮುಂತಾದ ವಿಷಯಗಳಿಗೆ ಆದ್ಯತೆ ನೀಡಬೇಕಾಗಿತ್ತು. ಆದರೆ ಮೆಸ್ಕಾಂ ರ್ನಿಲಕ್ಷದಿಂದಾಗಿ ಒಂದು ವಾರ ವಿದ್ಯುತ್​ ಇಲ್ಲದಂತಾಯಿತು. ಅರಣ್ಯ ಇಲಾಖೆ ಅನುಮತಿ ಪಡೆದು ಜಂಗಲ್​ ಕಟಿಂಗ್​ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಈಗಲೂ ಅವಕಾಶವಿದೆ.
> ಪ್ರಸನ್ನ ಕೆರೆಕೈ, ಕೇಂದ್ರ ಸಾಂಬಾರು ಮಂಡಳಿ ಸದಸ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net