ಸಮಾಜ ಸುಧಾರಕ ತಾತಯ್ಯ ಅವರು ದೈವೀ ಪವಾಡದಿಂದ ಮುದ್ದಮ್ಮ, ಕೊಂಡಪ್ಪ ಅವರ ಪುತ್ರನಾಗಿ ಜನಿಸಿದರು. ಅವರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರ ಜ್ಞಾನ ಸಮುದ್ರದಂತೆ ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಧ್ಯಾಪಕಿ ಡಾ.ಛಾಯಾಕುಮಾರಿ ಬಣ್ಣಿಸಿದರು. ವಿಶೇಷ ಉಪನ್ಯಾಸ ನೀಡಿದ ಅವರು, ಸೋದರತ್ತೆಯ ಮಗಳು ಮುನಿಯಮ್ಮ (ಲಕ್ಷ್ಮಮ್ಮ) ಅವರೊಂದಿಗೆ ವಿವಾಹವಾಗಿ ಮೂವರು ಮಕ್ಕಳ ತಂದೆಯಾದರು. ಜೀವನ ನಿರ್ವಹಣೆಗಾಗಿ ಬಳೆ ಮಾರುವ ವೃತ್ತಿ ಕೈಗೊಂಡರು. ಹಣದ ಬೆನ್ನುಬೀಳದೆ ಶುದ್ಧ ಭಾವದಿಂದ ಬಳೆ ಮಾರುತ್ತಿದ್ದ ಇವರಿಗೂ ಪತ್ನಿಗೂ ವಿರಸ ಉಂಟಾಗುತ್ತದೆ. ಒಮ್ಮೆ ಬಳೆ ಮಾರಲು ಹೋದಾಗ ಸ್ವಾಮೀಜಿಯೊಬ್ಬರಿಂದ ಓಂ ನಮೋ ನಾರಾಯಣಾಯ ಎಂಬ ಮಂತ್ರೋಪದೇಶ ಪಡೆದರು. ನಂತರ ಬೆಣಚು ಕಲ್ಲೊಂದನ್ನು ಬಾಯಲ್ಲಿಟ್ಟುಕೊಂಡು ಕೈವಾರದ ನರಸಿಂಹ ಗುಹೆಯಲ್ಲಿ ಮೂರು ವರ್ಷ ಕಠಿಣ ತಪಸ್ಸು ಮಾಡಿ ದೈವ ಸಾಕ್ಷಾತ್ಕಾರ ಪಡೆದರು. ಆಗ ಬಾಯಲ್ಲಿದ್ದ ಕಲ್ಲು ಸಕ್ಕರೆಯಾಗಿ ಬದಲಾಗುತ್ತದೆ. ನಂತರ ಯೋಗಿ ನಾರೇಯಣ ಎಂದು ಪ್ರಸಿದ್ಧರಾದ ಅವರು ಮುಂದೆ ಪವಾಡ ಪುರುಷರಾದರು ಎಂದು ವಿವರಿಸಿದರು. ಮನುಷ್ಯನ ಅಹಂ, ಅಂಧಕಾರ ಸಕ್ಕರೆಯಂತೆ ಕರಗಬೇಕು. ಜ್ಞಾನ ಜ್ಯೋತಿ ಬೆಳಗಬೇಕು ಎಂದು ಪ್ರತಿಪಾದಿಸಿದ ಅವರು ಜ್ಞಾನ, ದಯೆ, ಸಹಬಾಳ್ವೆ, ಸಂಸ್ಕಾರ ಕೊಡುವಂಥದ್ದೇ ನಿಜವಾದ ಶಿಕ್ಷಣ ಎಂದು ಸಾರಿದ್ದರು ಎಂದು ತಿಳಿಸಿದರು.