ಜೀವನದ ಸಂದೇಹಗಳಿಗೆ ಸಂವಿಧಾನವೇ ಉತ್ತರ | Constitution day

ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನವನ್ನು ಡಿಸಿ ಗುರುದತ್ತ ಹೆಗಡೆ ಉದ್ಘಾಟಿಸಿದರು. ಎನ್.ಹೇಮಂತ್,   ಬಾಬು ಆಂಜನಪ್ಪ, ಸತ್ಯನಾರಾಯಣ, ಡಿ.ಮಲ್ಲೇಶಪ್ಪ, ಶ್ರೀನಿವಾಸ್, ಎಚ್.ಉಮೇಶ್ ಇದ್ದರು.
ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನವನ್ನು ಡಿಸಿ ಗುರುದತ್ತ ಹೆಗಡೆ ಉದ್ಘಾಟಿಸಿದರು. ಎನ್.ಹೇಮಂತ್, ಬಾಬು ಆಂಜನಪ್ಪ, ಸತ್ಯನಾರಾಯಣ, ಡಿ.ಮಲ್ಲೇಶಪ್ಪ, ಶ್ರೀನಿವಾಸ್, ಎಚ್.ಉಮೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ವಿವಿಧೆಡೆ ಸಂವಿಧಾನ ದಿನಾಚರಣೆ
  • ಸಂವಿಧಾನವನ್ನು ಸರ್ವರೂ ತಿಳಿದುಕೊಳ್ಳಬೇಕು
  • ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಭಿಮತ
ಶಿವಮೊಗ್ಗ: ಸಂವಿಧಾನ(Constitution)ಕ್ಕೆ ಸಾಕಷ್ಟು ಆಯಾಮಗಳಿವೆ. ಜೀವನದಲ್ಲಿ ಯಾವುದೇ ರೀತಿಯ ಸಂಶಯ ಮತ್ತು ಸಂದೇಹಗಳಿಗೂ ಸಂವಿಧಾನವೇ ಉತ್ತರ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ(gurudatta hegade) ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರನ್ನೂ ಸಮಾನತೆಯಿಂದ ಕಾಣಲು, ಎಲ್ಲ ರೀತಿಯ ನ್ಯಾಯ ಒದಗಿಸಲು ಮಾರ್ಗಸೂಚಿ ಆಗಿರುವ ಸಂವಿಧಾನವನ್ನು ಮಕ್ಕಳನ್ನೂ ಒಳಗೊಂಡಂತೆ ಸರ್ವರೂ ಓದಿ ತಿಳಿದುಕೊಳ್ಳಬೇಕು ಎಂದರು.
ಸಂವಿಧಾನದ ಅರ್ಥ ತಿಳಿದು ಮುನ್ನಡೆಯಬೇಕು. ಅದರ ಮಹತ್ವ ತಿಳಿಯಲು ಚಿಂತನೆ ನಡೆಸಬೇಕು. ವಿಶೇಷವಾಗಿ ಮಕ್ಕಳು ಸಂವಿಧಾನದ ಮೂಲಭೂತ ಉದ್ದೇಶ, ಅದು ನೀಡಿರುವ ಹಕ್ಕುಗಳು, ಬಾಧ್ಯತೆಗಳನ್ನು ತಿಳಿದುಕೊಳ್ಳಬೇಕು. ನಾನು ಐಎಎಸ್‌(IAS)ಗೆ ತಯಾರಿ ನಡೆಸುವಾಗ ಪ್ರತಿ ಸಲ ಸಂವಿಧಾನ ಓದಿದಾಗಲೂ ಹೊಸ ಹೊಸ ಅರ್ಥ ಮತ್ತು ಪ್ರೇರಣೆ ಲಭಿಸುತ್ತಿತ್ತು. ಹಾಗಾಗಿ ಅಧಿಕಾರಿಗಳಾದ ನಮಗೆ ಎಲ್ಲರನ್ನೂ ಸಮಾನತೆಯಿಂದ ಕಾಣುವ, ಎಲ್ಲ ರೀತಿಯ ನ್ಯಾಯ ಒದಗಿಸಲು ಕಲಿಸಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಮಾತನಾಡಿ, ವೈವಿಧ್ಯಮಯ ಭಾರತದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ, ಭ್ರಾತ್ವತ್ವ, ಘನತೆಯಿಂದ ಬದುಕಲು ಅನುವು ಮಾಡಿಕೊಟ್ಟಿರುವ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ನೀಡಿ ಪ್ರಪಂಚದ ಅತ್ಯಂತ ದೊಡ್ಡ ಮತ್ತು ಸಂಪೂರ್ಣ ಸಂವಿಧಾನ ಹೊಂದಿದ ಹೆಗ್ಗಳಿಕೆ ನಮ್ಮದು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಜಿಪಂ ಸಿಇಒ ಎನ್.ಹೇಮಂತ್, ಡಿವೈಎಸ್‌ಪಿ ಬಾಬು ಆಂಜನಪ್ಪ, ಶಿವಮೊಗ್ಗ ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

ಸಮಾನತೆ ಆಶಯದಂತೆ ಬದುಕಬೇಕು

ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡಂತೆ. ಸಂವಿಧಾನದ ಆಶಯದಂತೆ ನಾವು ಬದುಕಬೇಕು ಎಂದು ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕ ಡಾ. ಎಂ.ಬಸವರಾಜಪ್ಪ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಅವರು, ಸಮಾಜದ ಸ್ವಾಸ್ಥ್ಯ ಕಾಪಾಡಲು ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜಾರಿಗೊಳಿಸಿದೆ. ಬಹಳ ಜನರ ಪರಿಶ್ರಮದಿಂದ ಸಂವಿಧಾನ ಕರಡು ರಚನೆಯಾಗಿದ್ದು, ಅದರ ಆತ್ಮ ಮಾತ್ರ ಅಂಬೇಡ್ಕರ್. ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಬರಬೇಕು ಎಂಬುದು ಅವರ ಆಶಯವಾಗಿತ್ತು ಎಂದರು. ಅಂಬೇಡ್ಕರ್ ಅವರು ಪ್ರಪಂಚದ ಎಲ್ಲ ಧರ್ಮಗಳನ್ನು ಅಧ್ಯಯನ ಮಾಡಿದ್ದರು. ನಮ್ಮ ನಾಗರಿಕತೆ, ಬುಡಕಟ್ಟು ಕುಲಚಿಹ್ನೆಗಳನ್ನು ಸಂವಿಧಾನದ ಮುಖಪುಟದಲ್ಲಿ ಬಳಸಿದ್ದಾರೆ. ಸಂವಿಧಾನದ ಮೂಲಪ್ರತಿ ಹಸ್ತಾಕ್ಷರದಲ್ಲಿದ್ದು ದೇಶದಲ್ಲಿ ಇದರ 3 ಮೂಲಪ್ರತಿಗಳಿವೆ. ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತೀಯತೆಗೆ ಸರಿಹೊಂದುವಂತೆ ರಚಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net