ಕಿಚ್ಚು ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ಅಧಿಸೂಚನೆ I central goverment notification

ಪಶ್ಚಿಮಘಟ್ಟ ಪ್ರದೇಶದ ಸಂಗ್ರಹ ಚಿತ್ರ.
ಪಶ್ಚಿಮಘಟ್ಟ ಪ್ರದೇಶದ ಸಂಗ್ರಹ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಚರ್ಚೆ
  • ಸಾಲು ಸಾಲು ಪ್ರತಿಭಟನೆ, ಪಾದಯಾತ್ರೆಗೆ ಸಿದ್ಧತೆ
  • ವೃಥಾ ಭೀತಿ ಮೂಡಿಸುತ್ತಿರುವ ಗಾಳಿ ಸುದ್ದಿಗಳು
ಅರವಿಂದ ಅಕ್ಲಾಪುರ ಶಿವಮೊಗ್ಗ
ಕಳೆದ 13 ವರ್ಷಗಳಿಂದ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಚರ್ಚೆಯಲ್ಲಿರುವ ಕಸ್ತೂರಿ ರಂಗನ್ (kasturi rangan) ವರದಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಪಶ್ಚಿಮ ಘಟ್ಟದ (western ghat) ಸೂಕ್ಷ್ಮ ಪ್ರದೇಶಗಳ ಕುರಿತು ತಿಂಗಳ ಹಿಂದೆ ಕೇಂದ್ರ ಸರ್ಕಾರ 7ನೇ ಬಾರಿಗೆ ಜಾರಿಗೊಳಿಸಿರುವ ಅಧಿಸೂಚನೆ (notification) ಈಗ ಕಿಚ್ಚು ಹೆಚ್ಚಿಸಿದೆ.
ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇರುವಾಗಲೇ ರಾಜಕೀಯ ಮೇಲಾಟಗಳಿಗೆ ಈ ಅಧಿಸೂಚನೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿ ಇರುವುದರಿಂದ ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಸಿದ್ಧಗೊಂಡಿದೆ.
ಸಾಲು ಸಾಲು ಪ್ರತಿಭಟನೆ, ಪಾದಯಾತ್ರೆಗೆ ಸಿದ್ಧತೆ ಆರಂಭವಾಗಿದೆ. ಇದರ ನಡುವೆಯೇ ಹರಿದಾಡುತ್ತಿರುವ ಗಾಳಿ ಸುದ್ದಿಗಳು ಜನರಲ್ಲಿ ವೃಥಾ ಭೀತಿ ಮೂಡಿಸುತ್ತಿವೆ. ಒಂಟಿ ಮನೆಗಳು, ಹಿರಿಯ ನಾಗರಿಕರೇ ಹೆಚ್ಚಾಗಿರುವ ಮಲೆನಾಡಿನ ಕುಗ್ರಾಮಗಳ ಜನರಲ್ಲಿ ವದಂತಿಗಳು ತಲ್ಲಣ ಸೃಷ್ಟಿಸಿವೆ.
ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಜಾರಿಗೆ ಬಂದಿರುವ ಅಧಿಸೂಚನೆ ವೃಥಾಕಾರಣ ಟೀಕೆಗೆ ಗುರಿಯಾಗುತ್ತಿದೆ. ಸ್ವತಃ ರಾಜ್ಯದ ಅರಣ್ಯ ಸಚಿವರೇ ಜನರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಭರವಸೆ ನೀಡಿದ ಮೇಲೂ ಆ ಪಕ್ಷದ ಮುಖಂಡರು ವರದಿ ಬಗ್ಗೆ, ಈಗ ಹೊರಡಿಸಿರುವ ಅಧಿಸೂಚನೆ ಬಗ್ಗೆ ಕಿಡಿಕಾರುತ್ತಿದ್ದಾರೆ.
ಈಗ ಇರುವ ಅರಣ್ಯ ಕಾಯ್ದೆಗಳೇ ಸಾಕಷ್ಟು ಕಟ್ಟುನಿಟ್ಟಾಗಿರುವುದರಿಂದ ಹೊಸ ಅಂಶಗಳನ್ನು ಮತ್ತೆ ಜಾರಿಗೊಳಿಸುವ ಅವಶ್ಯಕತೆಯೇ ಇಲ್ಲ ಎಂಬ ವಾಸ್ತವ ಸಂಗತಿಯನ್ನು ಯಾರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಈಗಲೂ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಅನ್ವಯ 20 ಸಾವಿರ ಚಮೀಗಿಂತಲೂ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಹಾಗೂ ನಿರ್ಮಾಣ ಯೋಜನೆಗಳನ್ನು ರದ್ದುಪಡಿಸಬೇಕು. ಅದರಲ್ಲೂ ಕೆಂಪು ವಲಯದ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಪ್ರಸ್ತುತ ಇರುವ ಅರಣ್ಯ ಕಾಯ್ದೆಗಳಲ್ಲೂ ಇದಕ್ಕೆ ಅವಕಾಶವಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ, ಹೊಸ ರಸ್ತೆ, ಸೇತುವೆಗಳ ನಿರ್ಮಾಣಕ್ಕೂ ಅರಣ್ಯ ಇಲಾಖೆ ಅನುಮತಿ ದೊರೆತಿಲ್ಲ. ಹೀಗಿರುವಾಗ ಕಸ್ತೂರಿ ರಂಗನ್ ವರದಿ ಜಾರಿಯಿಂದ ದೊಡ್ಡ ನಷ್ಟವಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಸ್ಥಳೀಯರೊಂದಿಗೆ ಚರ್ಚಿಸಿ ಯೋಜನೆ ರೂಪುಗೊಳಿಸುವ ಅವಕಾಶವೂ ವರದಿಯಲ್ಲಿದೆ.
"

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರೈತರನ್ನು ಎತ್ತಿಕಟ್ಟಿ ಅಧಿಸೂಚನೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಅಧಿಸೂಚನೆ ವಿರೋಧಿಸುವಂತೆ ಬಗರ್‌ಹುಕುಂ ಹಾಗೂ ಅರಣ್ಯ ಒತ್ತುವರಿ ಮಾಡಿದವರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಸಿ ಸುಳ್ಳುಗಳನ್ನು ಹೇಳಿ ಜನರನ್ನು ಹೆದರಿಸುತ್ತಿದ್ದಾರೆ. ದನಕರುಗಳಿಗೆ ಕೊಟ್ಟಿಗೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ, ರಸ್ತೆ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯಲ್ಲಿ ಜನರನ್ನು ಒಕ್ಕಲೆಬ್ಬಿಸುವ ಮಾತೇ ಇಲ್ಲ.

— ಪ್ರೊ. ಬಿ.ಎಂ.ಕುಮಾರಸ್ವಾಮಿ, ಪರಿಸರವಾದಿ

ವರದಿ ಬಗ್ಗೆ ವದಂತಿಗಳೇನು?

ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಜಾರಿಯಾದರೆ ಅರಣ್ಯ ಇಲಾಖೆ ಭೂಮಿಯಲ್ಲಿರುವವರನ್ನು ಒಕ್ಕಲೆಬ್ಬಿಸಲಾಗುತ್ತದೆ. ಕೃಷಿ ಚಟುವಟಿಕೆಯನ್ನು ನಿರ್ಬಂಧಿಸಲಾಗುತ್ತದೆ. ಜಾನುವಾರುಗಳಿಗೆ ಕೊಟ್ಟಿಗೆಯನ್ನೂ ನಿರ್ಮಿಸುವಂತಿಲ್ಲ. ಮನೆ ಎದುರು ತುಳಸಿಕಟ್ಟೆಯನ್ನೂ ಕಟ್ಟುವಂತಿಲ್ಲ ಎಂದು ಅನೇಕರು ವದಂತಿ ಹಬ್ಬಿಸುತ್ತಿರುವ ಪರಿಣಾಮ ಅಧಿಸೂಚನೆ ವಿರುದ್ಧ ದಿನದಿಂದ ದಿನಕ್ಕೆ ಕಿಚ್ಚು ಹೆಚ್ಚುತ್ತಲಿದೆ.
"

ಜನರನ್ನು ಕೇಳದೆ ಗ್ರಾಮದ ಅಭಿಪ್ರಾಯ ದಾಖಲು ಮಾಡದೆ ಇಡೀ ಗ್ರಾಮವನ್ನು ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದರೆ ಜನವಸತಿಯ ಗತಿ ಏನು? ಈಗಾಗಲೇ ಜನರು ಕಾಡುಪ್ರಾಣಿಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಡಾನೆ ತುಳಿತಕ್ಕೆ ಪ್ರಾಣ ಹಾನಿ, ಮಂಗಳಿಂದ ಫಸಲು ಹಾನಿಯಾಗುತ್ತಿದೆ. ಪರಿಸರ ಸೂಕ್ಷ್ಮ ಎಂಬುದು ಅರಣ್ಯದಂಚಿನ ಜನರಿಗೆ ಕಠೋರವಾಗುತ್ತದೆ ಎಂಬ ಕಾರಣಕ್ಕೆ ಅಧಿಸೂಚನೆಗೆ ವಿರೋಧ ವ್ಯಕ್ತವಾಗಿದೆ.

— ಬಿ.ಆರ್.ಜಯಂತ್, ರೈತ ಸಹಕಾರಿ ವೇದಿಕೆ ಸಂಚಾಲಕ

ವರದಿ ಜಾರಿಯಿಂದ ಅನುಕೂಲಗಳು

*ಅರಣ್ಯ ಒತ್ತುವರಿಗೆ ಸಂಪೂರ್ಣ ಬೀಳಲಿದೆ ಬ್ರೇಕ್
*ತಗ್ಗಲಿದೆ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ

ಸಂಪೂರ್ಣ ತೆರವು ಅಸಾಧ್ಯ

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮರಳು ಹಾಗೂ ಕಲ್ಲು ಗಣಿಗಾರಿಕೆ ನಿಷೇಧಿಸುವ ಪ್ರಸ್ತಾಪವೂ ಕಸ್ತೂರಿ ರಂಗನ್ ವರದಿಯಲ್ಲಿದೆ. ಇದು ಜಾರಿಯಾದರೆ ಪ್ರಸ್ತುತ ಗಣಿಗಾರಿಕೆ ನಡೆಯುತ್ತಿರುವ ಅನೇಕ ಪ್ರದೇಶಗಳನ್ನು ಕೈಬಿಡಬೇಕಾಗುತ್ತದೆ. ಇದರಿಂದ ಮರಳು, ಕಲ್ಲಿನ ಕೊರತೆ ಉಂಟಾಗಿ ನಿರ್ಮಾಣ ಕಾಮಗಾರಿಗಳಿಗೆ ಸಮಸ್ಯೆಯಾಗುತ್ತದೆ. ಇದು ಮಲೆನಾಡಿನ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದು ಸತ್ಯ. ಆದರೆ ಪರಿಸರ ಸೂಕ್ಷ್ಮ ವಲಯ ಘೋಷಣೆಯಾದರೆ ಅಲ್ಲಿನ ಜನರನ್ನು ಒಕ್ಕಲೆಬ್ಬಿಸುವುದು ಅಸಾಧ್ಯ. ಏಕೆಂದರೆ ಈಗಾಗಲೇ ಅಭಯಾರಣ್ಯದೊಳಗೆ ಅನೇಕ ಗ್ರಾಮಗಳಿವೆ. ಅಭಯಾರಣ್ಯದ ಅಂಚಿನ ಅನೇಕ ಗ್ರಾಮಗಳು ಪಟ್ಟಣದ ಮಾದರಿಯಲ್ಲಿ ಅಭಿವೃದ್ಧಿಗೊಂಡಿವೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿದೆ. ಹೀಗಾಗಿ ತೆರವು ಸಾಧ್ಯವಿಲ್ಲ.

ಪಶ್ಚಿಮಘಟ್ಟ ಅಧಿಸೂಚನೆ ಚಿತ್ರಣ

ಕರ್ನಾಟಕದ 10 ಜಿಲ್ಲೆಗಳು
ಒಟ್ಟು ಗ್ರಾಮಗಳು-1,439
ಶಿವಮೊಗ್ಗ-446 ಗ್ರಾಮಗಳು
ಉತ್ತರ ಕನ್ನಡ-566
ಚಿಕ್ಕಮಗಳೂರು-137
ಉಡುಪಿ-34
ದಕ್ಷಿಣ ಕನ್ನಡ-43
ಮೈಸೂರು-48
ಕೊಡಗು-53
ಹಾಸನ-30
ಚಾಮರಾಜ ನಗರ-20
ಬೆಳಗಾವಿ-62
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net