ಬಡವರಿಗೆ ಕೆಲಸವಿಲ್ಲದಂತೆ ಮಾಡಿದೆ ಕೇಂದ್ರ ಸರ್ಕಾರ | Stone Laying

ಸೊರಬ ತಾಲೂಕಿನ ಬಂಕಳ್ಳಿ ಗ್ರಾಮದಲ್ಲಿ ಜಲಜೀವನ್ ವಿಷನ್ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಗಣಪತಿ, ಜಯಶೀಲ ಗೌಡ, ಸದಾನಂದ ಗೌಡ, ಎಂ.ಡಿ.ಶೇಖರ್ ಇತರರಿದ್ದರು.
ಸೊರಬ ತಾಲೂಕಿನ ಬಂಕಳ್ಳಿ ಗ್ರಾಮದಲ್ಲಿ ಜಲಜೀವನ್ ವಿಷನ್ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ಗಣಪತಿ, ಜಯಶೀಲ ಗೌಡ, ಸದಾನಂದ ಗೌಡ, ಎಂ.ಡಿ.ಶೇಖರ್ ಇತರರಿದ್ದರು.
Published on
ಸೊರಬ: ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಹೆಸರು ಬದಲಾಯಿಸಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಎಂದಿಗೂ ಮನರೇಗಾ ಯೋಜನೆಯನ್ನು ನಿಲ್ಲಿಸಲು ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಜಡೆ ಹೋಬಳಿಯ ತಲಗಡ್ಡೆ ಗ್ರಾಪಂ ವ್ಯಾಪ್ತಿಯ ಬಂಕಳ್ಳಿ, ಕೋಡಿಕೊಪ್ಪ ಹಾಗೂ ತಲಗಡ್ಡೆ ಗ್ರಾಮದಲ್ಲಿ ಬುಧವಾರ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲಜೀವನ್ ಮಿಷನ್ ಯೋಜನೆಯಡಿ 490 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ, ಸಾರ್ವಜನಿಕ ಉದ್ಯಾನ ಹಾಗೂ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನೀಡುವ ಮೂಲಕ ನುಡಿದಂತೆ ನಡೆದುಕೊಂಡಿದೆ. ಈ ಯೋಜನೆಗಳು ಮುಂದುವರಿಯಲಿವೆ. ಆದರೆ ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ತೆಗೆದುಹಾಕಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಮನರೇಗಾ ಯೋಜನೆಯಡಿ ಗ್ರಾಮಾಭಿವೃದ್ಧಿ ಜತೆಗೆ ಕೂಲಿಕಾರರು ಆರ್ಥಿಕವಾಗಿ ಸಬಲವಾಗುತ್ತಿದ್ದರು. ಕೇಂದ್ರ ಸರ್ಕಾರ ಅದನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ತಾಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವಿಕುಮಾರ್, ಗ್ರಾಪಂ ಉಪಾಧ್ಯಕ್ಷ ಮಂಜುನಾಥ, ತಹಸೀಲ್ದಾರ್ ಪುರಂದರ್, ಇಒ ಶಶಿಧರ್, ಬಿಇಒ ಆರ್.ಪುಷ್ಪಾ, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ ಕುಮಾರ್, ಎಪಿಎಂಸಿ ವ್ಯವಸ್ಥಾಪಕಿ ಆಶಾ, ಇಕ್ಬಲ್ ಜಾತಿಗಾರ್, ಬಸವಂತಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net