ಸಾಗರ: ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ಭಗವದ್ಗೀತೆ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಅಭಿಯಾನ ಯಶಸ್ಸಿಗೆ ಸಹಸ್ರಾರು ಜನರು ಕೈಜೋಡಿಸಿದ್ದರು ಎಂದು ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಅಶೋಕ್ ಜಿ. ಭಟ್ ಹೇಳಿದರು.
ಭಗವದ್ಗೀತೆ ಅಭಿಯಾನ ಸಮಿತಿಯಿಂದ ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಭಗವದ್ಗೀತೆ ಮಹಾ ಸಮರ್ಪಣೆ ಅಭಿಯಾನ ಕುರಿತು ನಗರದ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿದ್ದ ಚಿಂತನ-ಮಂಥನ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವಮೊಗ್ಗದಲ್ಲಿ ಬೃಹತ್ ಭಗವದ್ಗೀತೆ ಅಭಿಯಾನ ನಡೆಸುವ ಸಂಕಲ್ಪವನ್ನು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಮಾಡಿದ್ದರು. ಜುಲೈ ತಿಂಗಳಿನಿಂದಲೇ ಇದಕ್ಕೆ ಪೂರ್ವಸಿದ್ಧತೆಗಳು ನಡೆದು, ಅಕ್ಟೋಬರ್‌ನಲ್ಲಿ ಸಾಂಕೇತಿಕವಾಗಿ ಉದ್ಘಾಟನೆ ನೆರವೇರಿಸಲಾಗಿತ್ತು. ಅಭಿಯಾನದ ಯಶಸ್ಸಿಗೆ ಬೇರೆ ಬೇರೆ ಹಂತಗಳಲ್ಲಿ ಜನರು ಕೈಜೋಡಿಸಿದ್ದಾರೆ. ಸಾವಿರಾರು ಜನರು ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಏಕಕಂಠಸ್ತವಾಗಿ ಭಗವದ್ಗೀತೆ ಪಠಣ ಮಾಡಿದ್ದು ವಿಶೇಷ ಸಂದರ್ಭ ಎಂದು ಹೇಳಿದರು.
ಸಮಿತಿಯ ಪ್ರಧಾನ ಸಂಚಾಲಕ ಟಿ.ಜೆ.ಲಕ್ಷ್ಮೀನಾರಾಯಣ ಮಾತನಾಡಿ, ಭಗವದ್ಗೀತೆ ಪಠಣ ಅತ್ಯಂತ ಶ್ರೇಷ್ಠವಾದುದು. ನಿರೀಕ್ಷೆಗಿಂತ ಅಧಿಕ ಜನರು ಪಠಣದಲ್ಲಿ ಪಾಲ್ಗೊಂಡಿದ್ದರು. ಶ್ರೀಗಳ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದಿಂದ ಅಭಿಯಾನ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.