ಮಾದಕ ವಸ್ತು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಡಿಜಿಪಿ ಡಾ. ಎಂ.ಎ.ಸಲೀಂ ಅವರು ಕಾನೂನು ಸುವ್ಯವಸ್ಥೆ ಕುರಿತು ಸಭೆ ನಡೆಸಿದರು. ಡಾ. ಬಿ.ಆರ್.ರವಿಕಾಂತೇಗೌಡ, ಜಿ.ಕೆ.ಮಿಥುನ್‌ಕುಮಾರ್ ಇದ್ದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಡಿಜಿಪಿ ಡಾ. ಎಂ.ಎ.ಸಲೀಂ ಅವರು ಕಾನೂನು ಸುವ್ಯವಸ್ಥೆ ಕುರಿತು ಸಭೆ ನಡೆಸಿದರು. ಡಾ. ಬಿ.ಆರ್.ರವಿಕಾಂತೇಗೌಡ, ಜಿ.ಕೆ.ಮಿಥುನ್‌ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಪರಾಧ ಪ್ರಕರಣಗಳ ತಡೆಗಟ್ಟಿ
  • ತನಿಖೆಯಲ್ಲಿ ಬದ್ಧತೆಯಿರಲಿ
  • ಶಿಕ್ಷೆಯ ಪ್ರಮಾಣ ಹೆಚ್ಚಳವಾಗಲಿ
ಶಿವಮೊಗ್ಗ: ಮಾದಕ ದ್ರವ್ಯಗಳ ಕುರಿತು ತಳಮಟ್ಟದ ಮಾಹಿತಿ ಸಂಗ್ರಹಿಸಬೇಕು. ಗಾಂಜಾ ಬೆಳೆಯುವವರು, ಸೇವನೆ ಮಾಡುವವರು, ಮಾರಾಟ ಮಾಡುವವರು, ಸಂಗ್ರಹಣೆ ಮತ್ತು ಸಾಗಣೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ ಸಿಬ್ಬಂದಿಗೆ ಸೂಚಿಸಿದರು.
ಜಿಲ್ಲೆಗೆ ಭೇಟಿ ನೀಡಿದ್ದ ಅವರು ಕಾನೂನು ಸುವ್ಯವಸ್ಥೆ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಸಿ ಸಿಬ್ಬಂದಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಶಿವಮೊಗ್ಗ ಜಿಲ್ಲೆ ಭೌಗೋಳಿಕವಾಗಿ ಮಾತ್ರವಲ್ಲದೆ ಅಪರಾಧ ಪ್ರಕರಣಗಳ ವರದಿಯಲ್ಲೂ ಸಹ ದೊಡ್ಡ ಜಿಲ್ಲೆಯಾಗಿದೆ ಎಂದು ಎಚ್ಚರಿಸಿದರು.
ಯಾವುದೇ ಒಂದು ಪ್ರದೇಶದಲ್ಲಿ ಜರುಗುವ ಅಪರಾಧ ಕೃತ್ಯಗಳು ಬೇರೆಡೆಯೂ ಅಪರಾಧ ಇಲ್ಲವೆ ಅಹಿತಕರ ಘಟನೆಗಳಿಗೆ ಕಾರಣವಾಗುತ್ತವೆ. ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಅಪರಾಧ ಮನಸ್ಥಿತಿಯ ವ್ಯಕ್ತಿಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಶಿವಮೊಗ್ಗ ಸೂಕ್ಷ್ಮ ಮತ್ತು ಪ್ರಮುಖ ಜಿಲ್ಲೆಯಾಗಿದೆ. ಪೊಲೀಸರ ಉತ್ತಮ ಕಾರ್ಯವೈಖರಿಯಿಂದ ಈ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದೆ. ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದರೆ ಎಲ್ಲ ಆಯಾಮದಲ್ಲೂ ಕೆಲಸದ ಅನುಭವ ದೊರೆಯುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ದೊಡ್ಡ ಜಿಲ್ಲೆಯಾದ ಕಾರಣ ಆರ್‌ಎಎಫ್, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್, ಡಿಎಆರ್, ಎಸ್‌ಎಎಫ್ ಪೊಲೀಸ್ ಘಟಕಗಳು ಇಲ್ಲಿವೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಇದ್ದಾರೆ. ಜನರ ಸಮಸ್ಯೆಗೆ ಸ್ಪಂದಿಸಬೇಕೆಂದರು.
ದಾವಣಗೆರೆ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್.ರವಿಕಾಂತೇಗೌಡ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ ಎ.ಜಿ.ಕಾರಿಯಪ್ಪ, ರಮೇಶ್‌ಕುಮಾರ್ ಇತರರಿದ್ದರು.
ನೊಂದವರಿಗೆ ನೆರವಾಗಿ
ನೊಂದವರಿಗೆ ನೆರವು ಹಾಗೂ ಅಪರಾಧಿಗೆ ಶಿಕ್ಷೆ ಎಂಬ ತತ್ವದ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಗುಣಮಟ್ಟದ ತನಿಖೆ ಕೈಗೊಂಡು ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ಸಿಬ್ಬಂದಿ ಪಾತ್ರ ಬಹಳ ಮುಖ್ಯ. ತನಿಖೆಯಲ್ಲಿ ಲೋಪವಾಗದಂತೆ ಕಾರ್ಯನಿರ್ವಹಿಸಬೇಕೆಂದು ಡಾ. ಎಂ.ಎ.ಸಲೀಂ ಸಲಹೆ ನೀಡಿದರು. ಸಾರ್ವಜನಿಕರ ಸೇವೆಗೆ ಸದಾಕಾಲ ಲಭ್ಯವಿರಬೇಕು. ಪೊಲೀಸ್ ಇಲಾಖೆಯ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆ ಮೇಲೆ ಇಲಾಖೆಯ ಯಶಸ್ಸು ಇರುತ್ತದೆ. ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡು ಕಾನೂನು ವ್ಯಾಪ್ತಿಗೆ ಒಳಪಟ್ಟು ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು. ಕರ್ತವ್ಯದಲ್ಲಿ ಶ್ರದ್ಧೆ ಬಹಳ ಮುಖ್ಯ. ಗುಣಮಟ್ಟದ ತನಿಖೆಯಿಂದ ಮಾತ್ರ ಶಿಕ್ಷೆಯ ಪ್ರಮಾಣ ಹೆಚ್ಚಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ನೊಂದವರಿಗೆ ನೆರವು ನೀಡುವುದು, ಸಮುದಾಯದ ಕಡೆಗೆ ಪೊಲೀಸ್ ಇಲಾಖೆಯನ್ನು ಕೊಂಡೊಯ್ಯುವ ಜತೆಗೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಬೇಕು ಎಂದರು.

ನಾವು ನಿರ್ವಹಿಸುವ ಕೆಲಸ ಮತ್ತು ಕೈಗೊಳ್ಳುವಂತಹ ನಿರ್ಧಾರಗಳು ಮುಂದಿನ ದಿನಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ನೇರ ಪರಿಣಾಮ ಬೀರುತ್ತವೆ. ಯಾವುದೇ ತನಿಖೆ ಹಾಗೂ ಇತರ ಇಲಾಖೆಗಳೊಂದಿಗೆ ವ್ಯವಹರಿಸುವಾಗ ದಾಖಲಾತಿಗಳನ್ನು ಸೂಕ್ತ ರೀತಿ ನಿರ್ವಹಿಸಬೇಕು. ಮಹಜರು ನಡೆಸುವಾಗ, ಸಾಕ್ಷಿ, ಆಧಾರಗಳನ್ನು ಆಯ್ದುಕೊಳ್ಳುವಾಗ ಸಾಧ್ಯವಾದಷ್ಟು ಸರ್ಕಾರಿ ಪಂಚಗಾಮೆ ಅವರನ್ನು ಮತ್ತು ಸರ್ಕಾರಿ ಸಾಕ್ಷಿದಾರರನ್ನು ಗುರುತಿಸಬೇಕು. ಆಗ ಶಿಕ್ಷೆಯ ಪ್ರಮಾಣ ಹೆಚ್ಚುತ್ತದೆ. 

 ಡಾ. ಎಂ.ಎ.ಸಲೀಂರಾಜ್ಯ ಪೊಲೀಸ್ ಮಹಾನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net