ಶಿಕಾರಿಪುರ: ಒತ್ತಡದ ಜೀವನಶೈಲಿ ಪರಿಣಾಮ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಡಾ. ಜಾಧವ್ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ಜಿಲ್ಲಾ ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನ, ಪುರಸಭೆ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದ ಸ್ವಾಸ್ಥೃ ಕಾಪಾಡುವ ಪೌರಕಾರ್ಮಿಕರು ವೈಯಕ್ತಿಕ ಆರೋಗ್ಯಕ್ಕೂ ಗಮನ ಕೊಡಬೇಕು ಎಂದು ತಿಳಿಸಿದರು.
ಕಚೇರಿ ವ್ಯವಸ್ಥಾಪಕ ರಾಜಕುಮಾರ್ ಮಾತನಾಡಿ, ಹಿರಿಯರು ಆಯುರ್ವೇದ ಮತ್ತು ಉತ್ತಮ ಆಹಾರ ಪದ್ಧತಿಯಿಂದ ಆರೋಗ್ಯದಿಂದ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಸರಿಯಾದ ಆಹಾರ ಸೇವಿಸದೆ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದು, ಮಾತ್ರೆಗಳ ಮೇಲೆ ಅವಲಂಬಿತರಾಗುತ್ತಿದ್ದೇವೆ. ಅಡುಗೆ ಮನೆಯಲ್ಲಿ ಸಿಗುವ ಎಲ್ಲ ಪದಾರ್ಥಗಳಿಂದ ಆರೋಗ್ಯ ರಕ್ಷಿಸಬಹುದು. ಪ್ರತಿಯೊಬ್ಬರೂ ದಿನನಿತ್ಯ ಯೋಗ ಮತ್ತು ವ್ಯಾಯಾಮ ಮಾಡಬೇಕು ಎಂದು ತಿಳಿಸಿದರು.
ಡಾ. ಎ.ಪಿ.ನದಾಫ್, ಪುರಸಭೆ ಸಂಘಟನಾ ಅಧಿಕಾರಿ ಸುರೇಶ್, ಡಾ. ಸಂಜೀವ್ ರಾಥೋಡ್, ಡಾ. ರೋಶನ್, ಡಾ. ಆರೀಫ್, ಡಾ. ಸುಚಿತ್ರಾ, ಡಾ. ಲತಾ, ಹಿರಿಯ ಆರೋಗ್ಯ ನಿರೀಕ್ಷಕ ಸೈಯದ್ ನವಾಜ್, ಪೌರ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.