ಕಾರ್ಗಲ್: ಶರಾವತಿ ಕಣಿವೆಯ ವನ್ಯಜೀವಿ ಅಭಯಾರಣ್ಯದ ಉರುಳುಗಲ್ಲು ಮತ್ತು ಹೆಬ್ಬಯ್ಯನಕೇರಿ ಗ್ರಾಮದ ಅರಣ್ಯ ವಾಸಿಗಳಿಗೆ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಕಾನೂನುಬದ್ಧ ಅನುಮತಿಗಾಗಿ ತಾಲೂಕು ಆಡಳಿತದ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದರು.
ರಸ್ತೆ ಮತ್ತು ವಿದ್ಯುತ್ ಸೌಲಭ್ಯಕ್ಕಾಗಿ ಶರಾವತಿ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯ ನಿವಾಸಿಗಳು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಇದಕ್ಕೆ ಅರಣ್ಯ ಇಲಾಖೆ ಕಾನೂನುಗಳು ತೊಡಕಾಗಿವೆ. ಈ ಹಿಂದೆ ಭಾರಂಗಿ ಹೋಬಳಿ ಭಾನುಕುಳಿ ಗ್ರಾಪಂ ವ್ಯಾಪ್ತಿಯ ಬಿಳಿಗಾರಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಇದರ ಪರಿಹಾರಕ್ಕಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಲ್ಲಿ ಮನವಿ ಮಾಡಲಾಗಿತ್ತು.
ಭಾರಂಗಿ ಹೋಬಳಿ ವ್ಯಾಪ್ತಿಯ ಉರುಳುಗಲ್ಲು, ಹೆಬ್ಬಯ್ಯನಕೇರಿ, ಕಣಪಗಾರು, ಕಾನೂರು ಸೇರಿ ಸುತ್ತಮುತ್ತಲಿನ ರೈತ ಕುಟುಂಬಗಳು, ಮುಳುಗಡೆ ಸಂತ್ರಸ್ತರು, ಆದಿವಾಸಿಗಳು ಅರಣ್ಯ ಇಲಾಖೆ ಸಂಘರ್ಷದೊಂದಿಗೆ ಜೀವನ ಸಾಗಿಸುವಂತಾಗಿದೆ. ಇದೆಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ.
ಈ ಭಾಗದ ನಿವಾಸಿಗಳು ರಸ್ತೆ ಮತ್ತು ವಿದ್ಯುತ್ ಸಂಪರ್ಕವಿಲ್ಲದೆ ಕುಗ್ರಾಮಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇದೀಗ ಸರ್ವೇ ಕಾರ್ಯದಿಂದ ಆಶಾಭಾವನೆ ಮೂಡಿದೆ ಎಂದು ಬಿಳಗಾರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪದ್ಮರಾಜ್ ಚಪ್ಪರಮನೆ ತಿಳಿಸಿದರು.
ಶರಾವತಿ ಅಭಯಾರಣ್ಯದ ಉರುಳುಗಲ್ಲು, ಮೇಘಾನೆ ಹಾಗೂ ಭೀಮೇಶ್ವರ ರಸ್ತೆ ನಿರ್ಮಾಣಕ್ಕೆ ಸರ್ವೇ ಮಾಡಿ ಇದನ್ನು ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಳಿಸಲಾಗುತ್ತದೆ ಎಂದು ತಾಲೂಕು ಕೆಆರ್‌ಐಡಿಎಲ್ ಇಲಾಖೆ ಇಂಜಿನಿಯರ್ ನವೀನ್ ನಾಯ್ಕ್ ಮಾಹಿತಿ ನೀಡಿದರು.
ಇಂಜಿನಿಯರ್ ಭರತ್, ಪಿಡಿಒ ಚಂದ್ರು, ಗ್ರಾಮಸ್ಥರಾದ ಸೋಮರಾಜ್, ನಾಗರಾಜ್, ಸಂತೋಷ್‌ಕುಮಾರ್, ದಿನೇಶ್ ಜೈನ್, ಉದಯ್, ತಾಲೂಕು ಸರ್ವೇ ಅಧಿಕಾರಿಗಳು ಇದ್ದರು.