ಆಧುನಿಕ ಮಹಿಳೆ ಎಂದರೆ ಪಾಶ್ಚಾತ್ಯ ಉಡುಗೆ ತೊಟ್ಟವಳು, ಆಂಗ್ಲ ಭಾಷೆ ಮಾತನಾಡುವವಳು, ನವೀನ ಜೀವನಶೈಲಿ ಅನುಸರಿಸುವವಳು ಎಂಬ ಕಲ್ಪನೆಗಳಿವೆ. ತವರು ಮನೆಯಲ್ಲಿ ನೀಡಿದ ಬಂಗಾರದ ಆಭರಣಗಳನ್ನು ಗಿರವಿ ಅಂಗಡಿಯಲ್ಲಿಟ್ಟು ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸುವವಳೂ ಆಧುನಿಕ ಮಹಿಳೆಯೇ ಎಂದು ರಂಜನಿ ರಾಘವನ್ ಹೇಳಿದರು. 12ನೇ ಶತಮಾನದ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಕೇಶವನ್ನೇ ಉಡುಗೆ ಮಾಡಿಕೊಂಡು ಅನುಭವ ಮಂಟಪಕ್ಕೆ ಬಂದು ಚನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ಸಾರ್ವಜನಿಕವಾಗಿ ಹೇಳಿದ ಅಕ್ಕಮಹಾದೇವಿ ಕೂಡ ಅಂದಿನ ಸನ್ನಿವೇಶದಲ್ಲಿ ಆಧುನಿಕ ಮಹಿಳೆ. ಇಂದು ಮಹಿಳೆ ತನ್ನ ಅಭಿಪ್ರಾಯ ಹೇಳಿಕೊಂಡರೆ ಆಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದಾಳಿಯೇ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.