ಶೋಧನಾ ಸಮಿತಿಗೆ ತೀವ್ರ ಆಕ್ಷೇಪ I search comitee

ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ.
ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷರ ನೇಮಕಕ್ಕೆ ಮಾನದಂಡ ಉಲ್ಲಂಘನೆ
  • ಶಿವಮೊಗ್ಗ ಕೃಷಿ ವಿವಿ ಕುಲಪತಿ ಆಯ್ಕೆ ಹಿನ್ನೆಲೆ
  • ಸರ್ಕಾರದ ಹಂತದಲ್ಲಿ ವಿರೋಧ ದಾಖಲಿಸಿದ ಕೃಷಿ ವಿಜ್ಞಾನಿಗಳು
ಅರವಿಂದ ಅಕ್ಲಾಪುರ ಶಿವಮೊಗ್ಗ
ಕೆಳದಿ ಶಿಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (university) ದ ಕುಲಪತಿ ಡಾ. ಆರ್.ಸಿ.ಜಗದೀಶ್ ಅವಧಿ ಮುಂದಿನ ತಿಂಗಳು ಮುಕ್ತಾಯವಾಗಲಿದೆ. ಇದರ ಬೆನ್ನಲ್ಲೆ ಸರ್ಕಾರ ಈಗಾಗಲೇ ಹೊಸ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ (search comitee) ರಚಿಸಿದೆ. ಆದರೆ ಈ ಸಮಿತಿ ಬಗ್ಗೆಯೇ ಸಾಕಷ್ಟು ಆಕ್ಷೇಪಗಳು (objections) ಕೇಳಿಬಂದಿವೆ.
ಶಿವಮೊಗ್ಗ ಜಿಲ್ಲೆ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಗೆ ಹೊಸ ಕುಲಪತಿ ಆಯ್ಕೆ ಸಂಬಂಧ ಶೋಧನಾ ಸಮಿತಿ ರಚಿಸಿ ಮೇ 14ರಂದು ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಆ ಪ್ರಕಾರ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಶೋಧನಾ ಸಮಿತಿಯಲ್ಲಿ ಡಾ. ಎಸ್.ವಿ.ಸುರೇಶ್ ಅವರೊಂದಿಗೆ ಮೂವರು ಸದಸ್ಯರು ಹಾಗೂ ಓರ್ವ ಕನ್ವೀನರ್ ಕೂಡಾ ಇದ್ದಾರೆ. ಈ ಸಮಿತಿ ಈಗಾಗಲೇ ತನ್ನ ಕೆಲಸ ಆರಂಭಿಸಿದೆ. ಇದರ ನಡುವೆ ಸಮಿತಿ ಅಧ್ಯಕ್ಷರ ಬಗ್ಗೆ ಉನ್ನತ ಶಿಕ್ಷಣ ಕ್ಷೇತ್ರ, ಪರಿಸರ ವಿಜ್ಞಾನ ಮತ್ತಿತರ ವಲಯಗಳಲ್ಲಿ ಸಾಕಷ್ಟು ಕೆಲಸ ಮಾಡಿರುವ 40ಕ್ಕೂ ಹೆಚ್ಚು ಮಂದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಮಿತಿ ಅಧ್ಯಕ್ಷರ ನೇಮಕಾತಿಯು ತಾಂತ್ರಿಕವಾಗಿ ಸಿಂಧುವಾಗಿದ್ದರೂ ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳುತ್ತಿರುವ ಶೈಕ್ಷಣಿಕ ಸ್ವಾಯತ್ತತೆ, ನೈತಿಕತೆ ಮತ್ತು ನಿಷ್ಪಕ್ಷಪಾತ ಆಡಳಿತದ ಮೂಲಭೂತ ಮಾನದಂಡಗಳಿಗೆ ಸ್ಪಷ್ಟ ವಿರುದ್ಧವಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಶೋಧನಾ ಸಮಿತಿ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಹೊಸ ಕುಲಪತಿ ಆಯ್ಕೆ ಪಾರದರ್ಶಕವಾಗಿ ನಡೆಯುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಇಲ್ಲಿ ವೈಯಕ್ತಿಕ ಹಿತಾಸಕ್ತಿ ಇಲ್ಲವೇ ಪ್ರಭಾವಗಳು ಕೆಲಸ ಮಾಡಬಹುದಾದ ಸಾಧ್ಯತೆಗಳೂ ಇವೆ. ಈ ಎಲ್ಲ ಕಾರಣದಿಂದ ಕೆಳದ ಶಿವಪ್ಪನಾಯಕ ವಿವಿಯ ಮುಂದಿನ ಕುಲಪತಿ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ.
ಅಧ್ಯಕ್ಷರ ಬಗ್ಗೆ ಆಕ್ಷೇಪವೇಕೆ?
ಕುಲಪತಿ ಆಯ್ಕೆ ಶೋಧನಾ ಸಮಿತಿ ಅಧ್ಯಕ್ಷ ಡಾ. ಎಸ್.ವಿ.ಸುರೇಶ್ ಪ್ರಸ್ತುತ ಬೆಂಗಳೂರು ಕೃಷಿ ವಿವಿ ಕುಲಪತಿ. ಬೆಂಗಳೂರು ಕೃಷಿ ವಿವಿಯು ಕೆಳದಿ ಶಿವಪ್ಪನಾಯಕ ಕೃಷಿ ವಿವಿಯ ಸಹೋದರ ಸಂಸ್ಥೆ. ಹೀಗಿರುವಾಗ ಆ ವಿವಿಯ ಹಾಲಿ ಕುಲಪತಿಯನ್ನು ಶೋಧನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿರುವ ಬಗ್ಗೆ ಪ್ರಮುಖವಾಗಿ ಆಕ್ಷೇಪ ವ್ಯಕ್ತವಾಗುತ್ತಿದೆ. ಹಿತಾಸಕ್ತಿ ಸಂಘರ್ಷ, ಸಂಸ್ಥಾತ್ಮಕ ನೈತಿಕತೆ, ಆಯ್ಕೆ ಪ್ರಕ್ರಿಯೆಯ ಸ್ವಾಯತ್ತತೆ ಹಾಗೂ ಸಾರ್ವಜನಿಕ ವಿಶ್ವಾಸಾರ್ಹತೆ ದೃಷ್ಟಿಯಿಂದ ಡಾ. ಸುರೇಶ್ ಅವರ ನೇಮಕಾತಿಯನ್ನು ಮರುಪರಿಶೀಲಿಸಿ, ಸಂಪೂರ್ಣ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತಜ್ಞರನ್ನು ಒಳಗೊಂಡ ಸಮಿತಿಯನ್ನು ಮರುರಚಿಸುವಂತೆ ಒತ್ತಾಯ ಕೇಳಿಬಂದಿದೆ.

ಮುಂದಿನ ತಿಂಗಳು ಅವಧಿ ಪೂರ್ಣ

ಕೆಳದಿ ಶಿವಪ್ಪನಾಯಕ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಅಧಿಕಾರದ ಅವಧಿ ಜು.12ಕ್ಕೆ ಮುಕ್ತಾಯವಾಗಲಿದೆ. ಈಗಾಗಲೇ ಶೋಧನಾ ಸಮಿತಿ ರಚನೆಯಾಗಿರುವುದು ಮಾತ್ರವಲ್ಲ, ಕುಲಪತಿ ಸ್ಥಾನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿ ಮೇ 31ಕ್ಕೆ ಮುಗಿದಿದೆ. ಅರ್ಜಿ ಸಲ್ಲಿಸಿರುವವರ ಪೂರ್ವಾಪರ, ಅವರ ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಸಮಿತಿಯು ಮೂವರ ಹೆಸರನ್ನು ಅಂತಿಮಗೊಳಿಸಲಿದೆ. ಅಂತಿಮವಾಗಿ ಒಬ್ಬರು ಆಯ್ಕೆಯಾಗಲಿದ್ದಾರೆ. ಈಗ ಶೋಧನಾ ಸಮಿತಿ ಬಗ್ಗೆ ಅಪಸ್ವರ ವ್ಯಕ್ತವಾಗಿರುವುದರಿಂದ ಒಂದು ವೇಳೆ ಬೇರೆ ಸಮಿತಿ ರಚನೆಯಾದರೆ ಕುಲಪತಿ ಆಯ್ಕೆ ಪ್ರಕ್ರಿಯೆಯೂ ವಿಳಂಬವಾಗಲಿದೆ.

ನಿಯಮಾವಳಿ ಏನು?

ಯುಜಿಸಿ ನಿಯಮಾವಳಿ-2018 ಹಾಗೂ ಐಸಿಎಆರ್ ಮಾದರಿ ಕಾಯ್ದೆ ಪ್ರಕಾರ ಶೋಧನಾ ಸಮಿತಿ ಅಧ್ಯಕ್ಷರು ಸಕ್ರಿಯ ಆಡಳಿತಾತ್ಮಕ ಸಂಬಂಧ ಹೊಂದಿರುವ ಸಹೋದರ ಸಂಸ್ಥೆಗಳಿಂದ ಕನಿಷ್ಠ 10 ವರ್ಷ ದೂರವಿರಬೇಕು. ಸಮಿತಿ ಮುಖ್ಯಸ್ಥರು ರಾಷ್ಟ್ರೀಯ ಮಟ್ಟದ ಖ್ಯಾತ ವಿಜ್ಞಾನಿ ಅಥವಾ ಶಿಕ್ಷಣ ತಜ್ಞರಾಗಿರಬೇಕು. ರಾಜ್ಯ ಸರ್ಕಾರ ಮತ್ತು ವಿವಿಯ ಆಂತರಿಕ ವಲಯದಿಂದ ಸಂಪೂರ್ಣ ದೂರವಿರಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೊಂದಿಗೆ ಕಳೆದ 10 ವರ್ಷಗಳ ಕಾಲ ವೈಯಕ್ತಿಕ, ವೃತ್ತಿಪರವಾಗಿ ಅಥವಾ ಸಂಶೋಧನಾ ಒಡನಾಟ ಇರಲಿಲ್ಲ ಎಂದು ಶೋಧನಾ ಸಮಿತಿ ಅಧ್ಯಕ್ಷರು ಕಾನೂನುಬದ್ಧ ಲಿಖಿತ ಘೋಷಣೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಆಂಧ್ರಪ್ರದೇಶ ಕೃಷಿ ವಿವಿ ಕಾಯ್ದೆ ಸೇರಿ ದೇಶದ ಪ್ರಗತಿಪರ ವ್ಯವಸ್ಥೆಗಳಲ್ಲಿ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಯಾವುದೇ ಕೃಷಿ ವಿವಿಗಳೊಂದಿಗೆ ಸಕ್ರಿಯ ಆಡಳಿತಾತ್ಮಕ ಸಂಬಂಧ ಹೊಂದಿರಬಾರದು ಎಂಬ ಸ್ಪಷ್ಟ ನಿರ್ಬಂಧವಿದೆ.
"

ಶೈಕ್ಷಣಿಕ ಸಂಸ್ಥೆಗಳ ಉನ್ನತ ಹುದ್ದೆಗಳ ಆಯ್ಕೆ ಕಾನೂನುಬದ್ಧವಾಗಿದ್ದರಷ್ಟೇ ಸಾಲದು. ಅದು ನೈತಿಕ ಹಾಗೂ ಸಾರ್ವಜನಿಕರ ನಂಬಿಕೆಗೆ ಅರ್ಹವಾಗಿರಬೇಕು. ಹೀಗಾಗಿ ಶೋಧನಾ ಸಮಿತಿ ಅಧ್ಯಕ್ಷರ ನೇಮಕಾತಿ ಬಗ್ಗೆ ಹಲವರ ಆಕ್ಷೇಪವಿದೆ. ರಾಜ್ಯದ ಏಕೈಕ ಕೃಷಿ ಹಾಗೂ ತೋಟಗಾರಿಕೆ ವಿವಿಯಾಗಿರುವ ಕೆಳದಿ ಶಿವಪ್ಪನಾಯಕ ವಿವಿ ಕುಲಪತಿ ಆಯ್ಕೆ ಪಾರದರ್ಶಕವಾಗಿರಲಿ.

— ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ ಬೆಂಗಳೂರು ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net