ಭದ್ರಾವತಿ: ತಾಲೂಕಿಗೆ ಅವಶ್ಯವಿದ್ದ ಪಶುವೈದ್ಯಕಿಯ ಪಾಲಿಕ್ಲಿನಿಕ್ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಅವಶ್ಯವಿರುವ ತಜ್ಞ ವೈದ್ಯರನ್ನು ನೇಮಿಸಲಾಗುವುದು. ಈ ಬಗ್ಗೆ ಶಾಸಕರೊಂದಿಗೆ ಮಾತುಕತೆ ನಡೆಸಿ ಸರ್ಕಾರದ ಮೂಲಕ ನೇಮಕಗೊಳಿಸಲು ಪ್ರಯತ್ನಿಸುವುದಾಗಿ ನಗರಸಭೆ ಅಧ್ಯೆ ಜೆ.ಸಿ.ಗೀತಾ ರಾಜಕುಮಾರ್ ಹೇಳಿದರು.
ಹೊಸಮನೆ ಮುಖ್ಯರಸ್ತೆಯ ಪಶುಆಸ್ಪತ್ರೆ ಆವರಣದಲ್ಲಿ ಗುರುವಾರ ಜಿಪಂ, ತಾಪಂ, ನಗರಸಭೆ, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಿರುವ ಪಶುವೈದ್ಯಕಿಯ ಪಾಲಿ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆಗೆ ಆದ್ಯತೆ ನೀಡುವ ಸಲುವಾಗಿ ಸರ್ಕಾರ ಅನೇಕ ಯೋಜನೆ ನೀಡುತ್ತ ಬಂದಿದೆ. ಅವುಗಳಲ್ಲಿ ಪಾಲಿಕ್ಲಿನಿಕ್ ಸಹ ಒಂದು. ಜಿಲ್ಲೆಗೆ ಸೀಮಿತವಾಗಿದ್ದ ಪಾಲಿಕ್ಲಿನಿಕ್ ತಾಲೂಕಿನಲ್ಲಿ ಪ್ರಾರಂಭಗೊಂಡರೆ ರಾಸುಗಳ ಪಾಲನೆಗೆ ಅನುಕೂಲವಾಗುವುದು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯಂತೆ ಶಾಸಕ ಬಿ.ಕೆ.ಸಂಗಮೇಶ್ವರ ಅವರು ತಾಲೂಕಿನಲ್ಲಿ ಪಾಲಿಕ್ಲಿನಿಕ್ ಆರಂಭಿಸಿದ್ದಾರೆ. ಅಗತ್ಯ ಚುಚ್ಚುಮದ್ದು ಸೇರಿ ಇತರ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿದೆ ಎಂದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಬಿ.ಎಸ್.ಗಣೇಶ್ ಮಾತನಾಡಿ, ಕಟ್ಟಡವಿದ್ದರೆ ಸಾಲದು. ರಾಸುಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ಮುಖ್ಯ. ಈ ನಿಟ್ಟಿನಟ್ಟಿ ಶಾಸಕರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.
ಪಶುಇಲಾಖೆ ಉಪನಿರ್ದೇಶಕ ಡಾ. ನಾಗರಾಜ್, ಪಶುವೈದ್ಯಾಧಿಕಾರಿ ಡಾ. ಬಿ.ಬಿ.ರಾಜಶೇಖರ್, ನಗರಸಭಾ ಸದಸ್ಯೆ ಅನುಸುಧಾ ಮೋಹನ್, ಕೃಷಿಕ ಸಮಾಜದ ಅಧ್ಯ ಎಚ್.ಎನ್.ನಾಗರಾಜ್, ಸುದರ್ಶನ್ ಇದ್ದರು.