ತೊಗರ್ಸಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಕ್ರಮ | Religious
ತೊಗರ್ಸಿಯಲ್ಲಿ ಮಳೆ ಹಿರೇಮಠ, ಪಂಚವಣ್ಣಿಗೆ ಮಠದ ಪೂಜ್ಯತ್ರಯರು ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಫಲ-ಪುಷ್ಪ ನೀಡಿ ಆಶೀರ್ವದಿಸಿದರು. ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಚನ್ನವೀರ ದೇಶೀಕೇಂದ್ರ ಶ್ರೀ, ಅಭಿನವ ಮಹಂತ ಶ್ರೀ, ಕೊಳಗಿ ರೇವಣಪ್ಪ, ಕವಲಿ ಸುಬ್ರಹ್ಮಣ್ಯ, ಮಲ್ಲನಗೌಡ ಇತರರಿದ್ದರು.
Published on:
Copied
Follow Us
ಶಿಕಾರಿಪುರ: ತೊಗರ್ಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅವಧಿಯಲ್ಲಿ ನೀಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೋತ್ಸವದಲ್ಲಿ ಸ್ವಾಮಿಯ ದರ್ಶನ ಪಡೆದು ಮಾತನಾಡಿದ ಅವರು, ತೊಗರ್ಸಿ ಕ್ಷೇತ್ರಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಕೆಳದಿ ಅರಸರು ದೇವಾಲಯಕ್ಕೆ ದಾನ, ದತ್ತಿಗಳನ್ನು ನೀಡಿದ್ದಾರೆ. ಇವತ್ತಿಗೂ ಲಕ್ಷಾಂತರ ಭಕ್ತರು ಸ್ವಾಮಿಯ ಜಾತ್ರೋತ್ಸವಕ್ಕೆ ಆಗಮಿಸುತ್ತಾರೆ ಎಂದರು.
ದೇವಸ್ಥಾನದ ಅಕ್ಕಪಕ್ಕ ಕಾಶಿ, ಉಜ್ಜಯಿನಿ ಪೀಠಗಳ ಶಾಖಾ ಮಠಗಳಿವೆ. ಇಲ್ಲಿರುವ ಪೂಜ್ಯರ ಪರಿಶ್ರಮದಿಂದ ದೇವಾಲಯ ಅಭಿವೃದ್ಧಿ ಕಂಡಿದೆ. ಐದು ದಶಕಗಳಿಂದ ಶಿವಾನುಭವ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಳೆದ ವರ್ಷದಿಂದ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಆಚರಿಸುವಂತೆ ಆಗಬೇಕು ಎಂದು ಹೇಳಿದರು.
ಎಪ್ಪತ್ತರ ದಶಕದಿಂದ ಮಳೆಮಠದಿಂದ ಜಾತ್ರಾ ಸಮಯದಲ್ಲಿ ಭಕ್ತರಿಗೆ ದಾಸೋಹ ನಡೆಸುತ್ತಿದ್ದರು. ಈ ವರ್ಷದಿಂದ ಮತ್ತೆ ದಾಸೋಹ ಸೇವೆ ನಡೆಯುತ್ತಿರುವುದು ಸಂತಸದ ವಿಚಾರ. ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಅಚ್ಚುಕಟ್ಟಾಗಿ ಜಾತ್ರೆ ನಿರ್ವಹಿಸಿವೆ ಎಂದರು.
ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪ ಅವರು ಈ ನಾಡು ಕಂಡ ಶ್ರೇಷ್ಠ ನಾಯಕ. ಅವರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ಧಾರೆಯೆರೆದಿದ್ದಾರೆ. ಅವರ ಜನಪರ ಹೋರಾಟ ಅನುಪಮ ಎಂದು ತಿಳಿಸಿದರು.
ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಕಿರಿಯ ಶ್ರೀ ಅಭಿನವ ಮಹಂತ ಸ್ವಾಮೀಜಿ, ಕೊಳಗಿ ರೇವಣಪ್ಪ, ತಾಪಂ ಮಾಜಿ ಅಧ್ಯಕ್ಷ ಕವಲಿ ಸುಬ್ರಹ್ಮಣ್ಯ, ಭೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸಣ್ಣಹನುಮಂತಪ್ಪ, ಮಲ್ಲನಗೌಡ ಇತರರಿದ್ದರು.