ನಕಾರಾತ್ಮಕ ವಿಷಯಗಳಿಂದ ದೂರವಿರಿ | Drama camp closing

ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದ ನಟಮಿತ್ರರು ತಂಡದ ಕಲಾವಿದರಿಗೆ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ರಂಗಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಪ್ರಶಸ್ತಿ ಪತ್ರ ವಿತರಿಸಿದರು. ಸಂದೇಶ್ ಜವಳಿ , ಪ್ರೊ. ಸೌಮ್ಯಾ, ಮಾರುತಿ ಇದ್ದರು.
ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಪಾಲ್ಗೊಂಡಿದ್ದ ನಟಮಿತ್ರರು ತಂಡದ ಕಲಾವಿದರಿಗೆ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ರಂಗಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಪ್ರಶಸ್ತಿ ಪತ್ರ ವಿತರಿಸಿದರು. ಸಂದೇಶ್ ಜವಳಿ , ಪ್ರೊ. ಸೌಮ್ಯಾ, ಮಾರುತಿ ಇದ್ದರು.
Published on
ತೀರ್ಥಹಳ್ಳಿ: ಯುವಕ ಪೀಳಿಗೆ ಸಾಮಾಜಿಕ ಜಾಲತಾಣದ ನಕಾರಾತ್ಮಕ ವಿಚಾರಗಳು, ರೀಲ್ಸ್ ಮುಂತಾದ ಹವ್ಯಾಸಗಳಿಗೆ ಬಲಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.
ಸ್ಥಳೀಯ ನಟಮಿತ್ರರು ಹವ್ಯಾಸಿ ಕಲಾ ತಂಡದಿಂದ ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ರಂಗಶಿಕ್ಷಣ ತರಬೇತಿಯ ಯುವ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಅವರು, ಈಚೆಗೆ ಗುಂಟೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ನಾಟಕೋತ್ಸವದಲ್ಲಿ ಪಾಲ್ಗೊಳ್ಳುವ ಹಂತಕ್ಕೇರಿದ ನಟಮಿತ್ರರು ತಂಡ ಪ್ರೇಕ್ಷಕರಲ್ಲಿ ನಾಟಕದ ಬಗ್ಗೆ ವಿಶೇಷ ಆಸಕ್ತಿಯನ್ನೂ ಮೂಡಿಸಿದೆ ಎಂದರು.
ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥೃವನ್ನೇ ಕೆಡಿಸುತ್ತಿದೆ. ಮೊಬೈಲ್ ಗೀಳಿಗೆ ಒಳಗಾಗುತ್ತಿರುವ ಯುವ ಪೀಳಿಗೆಯನ್ನು ನಿಯಂತ್ರಿಸಿ ಅವರನ್ನು ಸರಿದಾರಿಗೆ ತರುವ ಪ್ರಯತ್ನ ಆಗಬೇಕಿದೆ. ಶಾಲಾ ಕಾಲೇಜುಗಳಲ್ಲಿ ಸಿಗುವ ಶಿಕ್ಷಣದಿಂದಲೇ ಇದರ ಪರಿವರ್ತನೆ ಅಸಾಧ್ಯ. ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸುವುದರಿಂದ ಮಕ್ಕಳ ಮನಃಪರಿವರ್ತನೆ ಸಾಧ್ಯ, ರಂಗ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದು ಪ್ರತಿಭೆಗಳು ಅರಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನಾಡಿನ ಖ್ಯಾತ ಸೆಲೆಬ್ರಿಟಿಗಳು ಕೂಡಾ ಆರಂಭದಲ್ಲಿ ಇಂತಹ ಶಿಬಿರಗಳಲ್ಲಿ ತರಬೇತಿ ಪಡೆದವರೇ ಆಗಿದ್ದಾರೆ. ಹೆಗ್ಗೋಡಿನ ನೀನಾಸಂ ಕೇಂದ್ರದಿಂದ ಹೊರಬಂದಿರುವ ಹಲವಾರು ಪ್ರತಿಭೆಗಳು ಇಂದು ಕಲಾ ಕ್ಷೇತ್ರದಲ್ಲಿ ಬೆಳಗುತ್ತಿದ್ದಾರೆ. ಇದೇ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಟಮಿತ್ರರು ತಂಡದ ಸಾಧನೆಯೂ ಪ್ರಶಂಸನೀಯ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರ ಕಾರ್ಮಿಕರಿಂದಲೇ ಒಂದು ನಾಟಕವನ್ನು ಅಭಿನಯಿಸುವ ಮೂಲಕ ನಟಮಿತ್ರರು ತಂಡ ದಾಖಲೆಯನ್ನೇ ಮಾಡಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.
ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ್ ಜವಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಂಗ ಚಟುವಟಿಕೆ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದಲೇ ನಡೆಸಲಾಗಿರುವ ಈ ಶಿಬಿರದಲ್ಲಿ ನಟನೆ ಮಾತ್ರವಲ್ಲದೆ ರಂಗ ಸಜ್ಜಿಕೆ, ವಸ್ತ್ರವಿನ್ಯಾಸ, ರಂಗದ ನೇಪತ್ಯ ಸೇರಿ ಎಲ್ಲ ಆಯಾಮಗಳ ಬಗ್ಗೆಯೂ ತರಬೇತಿ ನೀಡಲಾಗಿದೆ ಎಂದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯೆ ಪ್ರೊ. ಸೌಮ್ಯಾ, ಮಾರುತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net