ಕರೂರು ಹೋಬಳಿಯಲ್ಲಿ ಠಾಣೆ ರಾಜಕೀಯ

ಕಳೆದ ಎರಡು ವರ್ಷಗಳ ಹಿಂದೆ ಬ್ಯಾಕೋಡು ಪೊಲೀಸ್​ ಉಪ ಠಾಣೆಯನ್ನು ನೆಲಸಮಗೊಳಿಸಿರುವುದು.
ಕಳೆದ ಎರಡು ವರ್ಷಗಳ ಹಿಂದೆ ಬ್ಯಾಕೋಡು ಪೊಲೀಸ್​ ಉಪ ಠಾಣೆಯನ್ನು ನೆಲಸಮಗೊಳಿಸಿರುವುದು.
Published on
ತುಮರಿ: ಕರೂರು ಹೋಬಳಿಯಲ್ಲಿನ ಬ್ಯಾಕೋಡು ಪೊಲೀಸ್​ ಉಪಠಾಣೆಯನ್ನು ಯಾವ ಠಾಣಾ ವ್ಯಾಪ್ತಿಗೆ ಸೇರಿಸಬೇಕು ಎನ್ನುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ.
ಸ್ಥಳಿಯ ಕಾಂಗ್ರೆಸ್​ ಮುಖಂಡ ಜಿ.ಟಿ.ಸತ್ಯನಾರಾಯಣ ನೇತೃತ್ವದಲ್ಲಿ ತುಮರಿ ಭಾಗದ ಗ್ರಾಮಸ್ಥರು ಎಎಸ್​ಪಿ ಬೆನಕಪ್ರಸಾದ್​ ಅವರಿಗೆ ಮನವಿ ಸಲ್ಲಿಸಿದ್ದು ಬ್ಯಾಕೋಡು ಉಪಠಾಣೆಯನ್ನು ಕಾರ್ಗಲ್​ನಿಂದ ಮುಕ್ತಗೊಳಿಸಿ ಸಾಗರ ಗ್ರಾಮಾಂತರ ಠಾಣೆಗೆ ಸೇರಿಸಬೇಕೆಂದು ಆಗ್ರಹಿಸಿದ್ದಾರೆ.
ಕುದುರೂರು ಕಾಂಗ್ರೆಸ್​ ಟಕದ ಅಧ್ಯ ರವಿ ಅಳೂರು ನೇತೃತ್ವದ ಮತ್ತೊಂದು ಬಣ, ಉಪಠಾಣೆಯನ್ನು ಕಾರ್ಗಲ್​ ವ್ಯಾಪ್ತಿಯಲ್ಲೇ ಮುಂದುವರಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬ್ಯಾಕೋಡು ಪೊಲೀಸ್​ ಉಪಠಾಣೆಯನ್ನು ಸಾಗರ ಗ್ರಾಮಾಂತರಕ್ಕೆ ಸೇರಿಸುವುದೋ ಅಥವಾ ಕಾರ್ಗಲ್​ ವ್ಯಾಪ್ತಿಯಲ್ಲಿ ಉಳಿಸುವುದೋ ಎಂಬುದು ಸಮಸ್ಯೆಯಾಗಿ ಪರಿಣಮಿಸಿದೆ.
ಕರೂರು ಹೋಬಳಿಯ ಜನರಿಗೆ ಕಂದಾಯ, ನ್ಯಾಯಾಲಯ ಸೇರಿದಂತೆ ಪ್ರತಿಯೊಂದು ಆಡಳಿತಾತ್ಮಕ ಕೆಲಸಗಳಿಗೂ ಸಾಗರವೇ ತಾಲೂಕು ಕೇಂದ್ರ. ಸಾಗರದಿಂದ ಬ್ಯಾಕೋಡ್​ಗೆ 70 ಕಿ.ಮೀ. ದೂರವಿದ್ದರೂ ಉತ್ತಮ ರಸ್ತೆ ಹಾಗೂ ಸಾರಿಗೆ ಸಂಪರ್ಕದಿಂದ ಸುಲಭವಾಗಿ ತಲುಪಬಹುದಾಗಿರುವುದರಿಂದ ಉಪಠಾಣೆಯನ್ನು ಸಾಗರ ಗ್ರಾಮಾಂತರ ವ್ಯಾಪ್ತಿಗೆ ಸೇರಿಸಬೇಕೆಂಬುದು ಹಲವು ಮುಖಂಡರ ಆಗ್ರಹ.  
ಸಿಗಂದೂರು ಸೇತುವೆಯಂತಹ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳದಲ್ಲಿ ಟ್ರಾಫಿಕ್​ ಜಾಮ್​ ಹಾಗೂ ತಾಂತ್ರಿಕ ಸವಾಲುಗಳು ಉಂಟಾದಾಗ ಅಧಿಕಾರಿಗಳು ಅರ್ಧ ಸೇತುವೆ ಮಾತ್ರ ನಮ್ಮ ವ್ಯಾಪ್ತಿಗೆ ಬರುತ್ತದೆ, ಉಳಿದದ್ದು ಸಾಗರಕ್ಕೆ ಸೇರುತ್ತದೆ ಎಂದು ಹೇಳುತ್ತಾರೆ. 
ಇಡೀ ಕರೂರು ಹೋಬಳಿಯ ಭೌಗೋಳಿಕ ವಿಸ್ತೀರ್ಣ ದೊಡ್ಡದಿರುವುದರಿಂದ, ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ತಂದರೆ ಆಡಳಿತಾತ್ಮಕ ಗೊಂದಲಗಳಿಗೆ ತೆರೆ ಬೀಳಲಿದೆ ಎಂಬುದು ಕೂಡ ಕೆಲವರ ಅಭಿಮತ. 
ಮತ್ತೊಂದು ಬಣ ಹೇಳುವುದೇನು? 
ಕಾರ್ಗಲ್​ ವ್ಯಾಪ್ತಿಗೆ ಉಪಠಾಣೆಯನ್ನು ಸೇರಿಸುವುದರಿಂದ ಸಾರ್ವಜನಿಕರಿಗೆ ಅನಗತ್ಯ ಅಲೆದಾಟ ತಪ್ಪುತ್ತದೆ. ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯು ಈಗಾಗಲೇ ಬಹಳ ವಿಸ್ತಾರವಾಗಿರುವುದರಿಂದ ಸಾರ್ವಜನಿಕರ ಸಮಸ್ಯೆಗಳ ಪರಿಹಾರ ವಿಳಂಬವಾಗುತ್ತದೆ. ಮುಖ್ತಾನೆ ಹೊಳೆಲಾಂಚ್​ ಪ್ರದೇಶದಲ್ಲಿ ಸೇತುವೆ ನಿರ್ಮಾಣದ ಪ್ರಸ್ತಾಪ ಸರ್ಕಾರದ ಮುಂದಿದೆ. ಸೇತುವೆ ನಿರ್ಮಾಣವಾದರೆ ಈ ಭಾಗದ ಜನರಿಗೆ ಕಾರ್ಗಲ್​ ಅತ್ಯಂತ ಸಮೀಪವಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಾರ್ಗಲ್​ ಠಾಣಾ ಸಿಬ್ಬಂದಿಗೂ ಅನುಕೂಲವಾಗುತ್ತದೆ ಎಂಬುದು ಮತ್ತೊಂದು ಬಣದ ಆಗ್ರಹ. 
ಶಾಲೆಗೆ ವರ್ಗಾವಣೆಗೊಂಡಿರುವ ಠಾಣೆ 
ಎರಡು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಬ್ಯಾಕೋಡು ಪೊಲೀಸ್​ ಉಪಠಾಣೆಯ ಕಟ್ಟಡವನ್ನು ಹರಾಜು ನಡೆಸಿ ನೆಲಸಮಗೊಳಿಸಲಾಗಿತ್ತು. ಆದರೆ ಹೊಸ ಕಟ್ಟಡ ನಿರ್ಮಿಸದ ಆಡಳಿತ ಮಂಡಳಿಯು ಉಪಠಾಣೆಯನ್ನು ತಾತ್ಕಾಲಿಕವಾಗಿ ಬ್ಯಾಕೋಡು ಸರ್ಕಾರಿ ಶಾಲೆಯ ಕೊಠಡಿಯೊಂದಕ್ಕೆ ಸ್ಥಳಾಂತರಿಸಿದೆ. ಶಾಲಾ ಕೊಠಡಿಗೆ ಠಾಣೆಯನ್ನು ವರ್ಗಾಹಿಸಿರುವುದಕ್ಕೆ ವಿರೋಧ ಸಹ ವ್ಯಕ್ತವಾಗುತ್ತಿದೆ. 
ಬ್ಯಾಕೋಡ್​ನಲ್ಲೇ ಠಾಣೆ ನಿರ್ಮಿಸಿ
ಬ್ಯಾಕೋಡ್​ನಲ್ಲೇ ಉಪಠಾಣೆಯನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತ ಪೊಲೀಸ್​ ಠಾಣೆ ನಿರ್ಮಿಸಬೇಕು. ಇಲ್ಲಿ ಠಾಣೆ ನಿರ್ಮಿಸುವುದರಿಂದ ಬ್ಯಾಕೋಡ್​ನಿಂದ ಸಾಗರದವರೆಗೆ ಎಲ್ಲ ಗ್ರಾಮ ಮತ್ತು ಗಡಿಗ್ರಾಮಗಳ ಭದ್ರತೆಗೆ ಸಹಕಾರಿಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಜನಪ್ರತಿನಿಧಿಗಳು ಮತ್ತು ಪೊಲೀಸ್​ ಇಲಾಖೆಯ ಉನ್ನತ ಅಧಿಕಾರಿಗಳು ಶ್ರೀವೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬುದು ಕೆಲವರ ಒತ್ತಾಯ. 
ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯು ಕಾರ್ಗಲ್​ ಸಮೀಪದ ಇಡುವಾಣಿವರೆಗೆ ಇದ್ದು ಇದನ್ನು ಅರಲಗೋಡಿನವರೆಗೂ ವಿಸ್ತರಿಸಬೇಕು. ತುಮರಿ ಪಂಚಾಯಿತಿ ವ್ಯಾಪ್ತಿಯ ಬರುವೆ, ಕಪ್​ದೂಸರಿನಂತಹ ಗಡಿಭಾಗದ ಹಳ್ಳಿಗಳಿಗೆ ಸಾಗರ ಅಥವಾ ಕಾರ್ಗಲ್​ನಿಂದ ತುರ್ತು ಪೊಲೀಸ್​ ಸೇವೆ ತಲುಪಿಸುವುದು ಸದ್ಯಕ್ಕೆ ಅತ್ಯಂತ ಕಷ್ಟ. ಆದ್ದರಿಂದ ಕಾರ್ಗಲ್​ ಠಾಣೆಯನ್ನು ಬ್ಯಾಕೋಡ್​ಗೆ ಸ್ಥಳಾಂತರಿಸಿ, ಬ್ಯಾಕೋಡ್​ನಿಂದ ಅರಲಗೋಡು ಹಾಗೂ ಸಿಗಂದೂರು ಸೇತುವೆ ಒಳಗೊಂಡ ಹುಲಿದೇವರ ಬನದವರೆಗೆ ಎರಡೂ ಬದಿಗಳಲ್ಲಿ ತಲಾ 30 ಕಿ.ಮೀ. ಸಮಾನಾಂತರ ಹಾಗೂ ಸೂಕ್ತ ವ್ಯಾಪ್ತಿ ಸಿಗಲಿದ್ದು ಕಾನೂನು ಸುವ್ಯವಸ್ಥೆ ನಿಯಂತ್ರಣ ಸುಲಭವಾಗಲಿದೆ. ಇದಕ್ಕೆ ಸರ್ಕಾರ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದು ಮತ್ತೊಂದು ಬಣದ ಆಗ್ರಹ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net