ತೀರ್ಥಹಳ್ಳಿ: ಭಾರತೀಯ ಜಾನಪದ ಸಾಂಸ್ಕೃತಿಕ ಪರಂಪರೆಯಲ್ಲಿ ಕರಾವಳಿ ಮೂಲದ ಯಕ್ಷಗಾನ ಕಲೆ ಧಾರ್ಮಿಕ ಮನೋಭಾವದೊಂದಿಗೆ ಸನಾತನ ಧರ್ಮದ ಸಾರವನ್ನು ಮುಂದಿನ ತಲೆಮಾರಿಗೆ ಸಾರುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಆರಗದಲ್ಲಿ ಸ್ಥಳೀಯ ಯಕ್ಷಮಿತ್ರ ಕಲಾ ಬಳಗ ಆಯೋಜಿಸಿದ್ದ ತೆಂಕು-ಬಡಗು ತಿಟ್ಟಿನ ಕಲಾವಿದರ ಪಾಲ್ಗೊಳ್ಳುವಿಕೆಯ ವಾಲಿ-ಸುಗ್ರೀವ ಯಕ್ಷಗಾನ ಪ್ರದರ್ಶನದಲ್ಲಿ ಸ್ಥಳೀಯ ಮೆಸ್ಕಾಂ ಸಿಬ್ಬಂದಿಯನ್ನು ಗೌರವಿಸಿ ಮಾತನಾಡಿದರು.
ದೇಶದ ಮೂಲ ಸಂಸ್ಕೃತಿಯೊಂದಿಗೆ ಧಾರ್ಮಿಕ ಭಾವನೆ ಹಾಗೂ ಸನಾತನ ಧರ್ಮದ ಮೌಲ್ಯಗಳನ್ನು ಜನರ ಹೃದಯದಲ್ಲಿ ತುಂಬುವ ಯಕ್ಷಗಾನ ಕಲೆಗೆ ಸಮನಾದ ಕಲೆ ವಿರಳ ಎಂದರು.
ಹಣ ಗಳಿಕೆಗೆ ಆದ್ಯತೆ ನೀಡದೆ ಕಲೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಬಹಳ ಮುಖ್ಯವಾಗಿ ಯಕ್ಷಗಾನ ಕಲಾವಿದರೇ ಸಂಕಷ್ಟದಲ್ಲಿರುವ ಸಹ ಕಲಾವಿದರನ್ನು ಪೋಷಿಸಿಕೊಂಡು ಬರುತ್ತಿರುವುದು ಗಮನಾರ್ಹ ಸಂಗತಿ. ಈ ಬೆಳವಣಿಗೆಯನ್ನು ಈ ಕ್ಷೇತ್ರದಲ್ಲಿ ಮಾತ್ರ ಕಾಣಬಹುದು ಮತ್ತು ಇದು ಕಲೆಯ ಮಹತ್ವವನ್ನು ಸಾರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಕ್ಷಗಾನ ಸಂಘಟಕ ರಾಘವೇಂದ್ರ ಆಚಾರ್ಯ ಗುಡ್ಡೇಕೊಪ್ಪ ಮಾತನಾಡಿ, ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣ ಪಡೆದವರನ್ನೂ ಆಕರ್ಷಿಸುತ್ತಿರುವ ಯಕ್ಷಗಾನ ಮೇಳಗಳು ಧಾರ್ಮಿಕ ಕ್ಷೇತ್ರದ ಕಡೆಯಿಂದಲೇ ನಡೆಯುತ್ತಿವೆ. ಆದರೆ ಟೆಂಟ್ ಮೇಳಗಳ ಸಂಖ್ಯೆ ನಶಿಸುತ್ತಿರುವುದು ಆತಂಕದ ಸಂಗತಿ ಎಂದರು.
ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ಭರತ್ ರಾಜ್ ಶೆಟ್ಟಿಯವರ ಭಾಗವತಿಕೆ, ವಾಲಿಯಾಗಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ,ದಿನೇಶ್ ಶೆಟ್ಟಿ, ವಿದ್ಯಾಧರ ಜಲವಳ್ಳಿ, ಸಂತೋಷ್ ಹಿಲಿಯಾಣ, ಮಂಕಿ ಈಶ್ವರ ನಾಯ್ಕ ಹಾಗೂ ರಮೇಶ್ ಭಂಡಾರಿ ಅವರ ಅಭಿನಯ ಪ್ರೇಕ್ಷಕರರನ್ನು ರಂಜಿಸಿತ್ತು.