ರಂಗಕಲೆಯಿಂದ ಸಂಸ್ಕೃತಿ ಪ್ರಸಾರ | Drama

ಶಿಕಾರಿಪುರದಲ್ಲಿ ಆಯೋಜಿಸಿದ್ದ ನಮ್ಮೊಳಗೊಬ್ಬ ಗಾಂಧಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಉದ್ಘಾಟಿಸಿದರು. ಡಿ.ಪ್ರಸನ್ನ, ಇಕ್ಬಾಲ್ ಅಹಮದ್, ಡಾ. ಶೈಲಜಾ, ಕೊಪ್ಪಲು ಮಂಜಣ್ಣ ಇತರರಿದ್ದರು.
ಶಿಕಾರಿಪುರದಲ್ಲಿ ಆಯೋಜಿಸಿದ್ದ ನಮ್ಮೊಳಗೊಬ್ಬ ಗಾಂಧಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಉದ್ಘಾಟಿಸಿದರು. ಡಿ.ಪ್ರಸನ್ನ, ಇಕ್ಬಾಲ್ ಅಹಮದ್, ಡಾ. ಶೈಲಜಾ, ಕೊಪ್ಪಲು ಮಂಜಣ್ಣ ಇತರರಿದ್ದರು.
Published on
ಶಿಕಾರಿಪುರ: ರಂಗಭೂಮಿ ಈ ಮಣ್ಣಿನ ಸಾಂಸ್ಕೃತಿಕ ಜಗತ್ತು. ಅದು ಯಾವತ್ತೂ ಚಲನಶೀಲವಾಗಿ ಇರಬೇಕು. ರಂಗ ಜಗತ್ತು ಕಳಾಹೀನವಾಗದಂತೆ ನಾವು ನೋಡಿಕೊಳ್ಳಬೇಕು ಎಂದು ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.
ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಶಿವಮೊಗ್ಗ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗುಡಿ ಸಾಂಸ್ಕೃತಿಕ ಕೇಂದ್ರದಿಂದ ಡಾ. ಡಿ.ಎಸ್.ಚೌಗುಲೆ ಇವರು ರಚಿಸಿ, ಚಿದಂಬರ ರಾವ್ ಜಂಬೆ ನಿರ್ದೇಶಿಸಿದ ‘ನಮ್ಮೊಳಗೊಬ್ಬ ಗಾಂಧಿ’ ನಾಟಕವನ್ನು  ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಹತ್ತು ಹಲವು ವಿಧಗಳಲ್ಲಿ ಕವಲೊಡೆದಿದೆ. ನೀನಾಸಂ, ರಂಗಾಯಣದಂತಹ ಸಂಸ್ಥೆಗಳು ರಂಗಪ್ರಯೋಗದಲ್ಲಿ ಹೊಸತನಕ್ಕೆ ನಾಂದಿ ಹಾಡಿವೆ. ಸಾಹಿತ್ಯ, ಸಂಗೀತ, ನೃತ್ಯರೂಪಕ, ನಾಟಕಗಳು ಮುಂದಿನ ತಲೆಮಾರಿಗೆ ನಮ್ಮ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ತಲುಪಿಸುವ ರಾಯಭಾರಿಗಳು. ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಂದಾಗಿ ರಂಗಕಲೆಯ ಮಹತ್ವ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಉತ್ತೇಜನಕಾರಿ ಕಾರ್ಯಕ್ರಮಗಳು ಅಗತ್ಯ ಎಂದರು.
ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ಮಾತನಾಡಿ, ಹಳೆಯ ರಂಗಭೂಮಿಗೂ ಇಂದಿನ ರಂಗಭೂಮಿಗೂ ಸಾಕಷ್ಟು ಬದಲಾವಣೆಗಳಾಗಿವೆ. ನಿರ್ದೇಶಕರು, ಕಲಾವಿದರು ಹೊಸತನದ ಪ್ರಯೋಗ ಮಾಡುತ್ತಿದ್ದಾರೆ. ದೇಶ-ವಿದೇಶಗಳ ನಾಟಕಗಳನ್ನು ರಂಗಭೂಮಿ ಮೇಲೆ ತಂದಿದ್ದಾರೆ. ವಿಮರ್ಶಾತ್ಮಕ, ವಿಡಂಬನಾತ್ಮಕ ನಾಟಕಗಳು ಜನಮನ ಸೆಳೆಯುತ್ತಿವೆ ಎಂದು ತಿಳಿಸಿದರು.
ಒಂದು ದೇಶದ ವಿರುದ್ಧ ಮತ್ತೊಂದು ದೇಶ ಯುದ್ಧಕ್ಕೆ ಸಿದ್ಧವಾಗುತ್ತಿರುವ ಈ ಸಂದರ್ಭ ಗಾಂಧೀಜಿ ಅವರ ಶಾಂತಿ ಮಂತ್ರದಿಂದ ಮಾತ್ರ ಶಾಂತಿ ನೆಲೆಸಲು ಸಾಧ್ಯ. ಶಾಂತಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಗಾಂಧೀಜಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರಂಗಾಯಣದ ರೆಪರ್ಟರಿ ಕಲಾವಿದರು ನಾಟಕ ಪ್ರದರ್ಶಿಸಿದರು. ಗುಡಿ ಕೇಂದ್ರದ ಅಧ್ಯಕ್ಷ ಇಕ್ಬಾಲ್ ಅಹಮದ್, ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ, ಸ್ನೇಹ ರಂಗದ ಸಂಸ್ಥಾಪಕ ಅಧ್ಯಕ್ಷ ಕೊಪ್ಪಲು ಮಂಜಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net