ಸೊರಬ ತಾಲೂಕಿನ ಹೊಳೆಮರೂರು ಗ್ರಾಮದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್ ಉದ್ಘಾಟಿಸಿದರು. ಚಂದ್ರಶೇಖರ್ ಪಾಟೀಲ್, ಸುಬ್ರಹ್ಮಣ್ಯ ಕಾನಡೆ, ಮೋಹನ್ ಇತರರಿದ್ದರು.
ಸೊರಬ: ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕ್ರೀಡೆ, ನಾಟಕ ಹಾಗೂ ಸಾಂಸತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್ ಅಭಿಪ್ರಾಯಪಟ್ಟರು.
ತಾಲೂಕಿನ ಹೊಳೆಮರೂರು ಗ್ರಾಮದಲ್ಲಿ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟಗಳು ಆಯೋಜಿಸುವುದರಿಂದ ಸ್ಥಳಿಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗುತ್ತದೆ. ಜತೆಗೆ ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾ ಭಾವನೆ ಮೈಗೂಡಿಸಿಕೊಳ್ಳಬೇಕು. ಕಬಡ್ಡಿಯಂತಹ ದೇಸಿ ಕ್ರೀಡೆಗಳು ಸುತ್ತಮುತ್ತಲಿನ ಹಳ್ಳಿಗಳ ಜನರ ನಡುವೆ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯ ವೃದ್ಧಿಸುತ್ತವೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ್ ಕಾನಡೆ ಮಾತನಾಡಿ, ಜಾತಿ, ರಾಜಕೀಯ ತಾರತಮ್ಯ ಮರೆತು ಸಹಬಾಳ್ವೆಯಿಂದ ಇದ್ದಾಗ ಮಾತ್ರ ಕಲೆ, ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳು ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.