ಸೊರಬದ ಜಡೆ ಶಾಖಾ ಮಠ ಮಮಧಪುರದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಜಡೆ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಮೌನಮಲ್ಲಿನಾಥ ಸ್ವಾಮೀಜಿ, ಶ್ರೀ ಗೌರಿಶಂಕರ ಸ್ವಾಮೀಜಿ ಇತರರಿದ್ದರು.
ಸೊರಬ: ಜಡೆ ಸಂಸ್ಥಾನ ಮಠ ಮನುಕುಲಕ್ಕೆ ಆಧ್ಯಾತ್ಮಿಕ ನೆಲೆಯ ಮಾರ್ಗದರ್ಶನ ನೀಡುತ್ತಿದ್ದು, ದೇಶ ವಿದೇಶದಲ್ಲಿ ಮಠದ ಕೀರ್ತಿ ಪಸರಿಸಿದೆ ಎಂದು ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಜಡೆ ಶಾಖಾ ಮಠ ಹಾನಗಲ್ ತಾಲೂಕಿನ ಮಮಧಪುರದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮ ಮತ್ತು ಧರ್ಮಸಭೆಯಲ್ಲಿ ಮಾತನಾಡಿ, ಹಿರಿಯ ಗುರುಗಳ ಆಶೀರ್ವಾದದಿಂದ ನಾಡಿನ ಉದ್ದಗಲಕ್ಕೂ ಸೇವೆ ಸಲ್ಲಿಸುವಂತೆ ಪ್ರೇರಣೆಗೊಂಡ ಶ್ರೀ ಮೌನಮಲ್ಲಿನಾಥ ಸ್ವಾಮೀಜಿ ಜನರಲ್ಲಿ ಸಂಸ್ಕಾರ, ಸತ್ಯ, ಧರ್ಮದ ಬೋಧನೆ ಮಾಡುತ್ತಿದ್ದಾರೆ ಎಂದರು.
ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ದುಶ್ಚಟಗಳಿಂದ ಮುಕ್ತಿಗೊಳ್ಳಲು ಕ್ರಾಂತಿಕಾರಕ ಹೋರಾಟ ಮಾಡುವ ಮೂಲಕ ಬದಲಾವಣೆ ತಂದರು. ವಿಶಿಷ್ಟ ಮತ್ತು ಶ್ರೇಷ್ಠ ಕೆಲಸಗಳಿಂದ ಜಡೆ ಮಠದ ಪರಂಪರೆಯನ್ನು ಶ್ರೀಕ್ಷೇತ್ರದಲ್ಲಿ ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹಾನಗಲ್ ಶ್ರೀ ಕುಮಾರಪ್ರಭು ಸ್ವಾಮೀಜಿ ಅವರು ಭಕ್ತರನ್ನೇ ಸಮಾಜದ ಆಸ್ತಿಯನ್ನಾಗಿ ನಿರ್ಮಾಣ ಮಾಡುವ ಶಕ್ತಿ ಹೊಂದಿದ್ದರು. ಸಮಾಜದಲ್ಲಿ ನಮ್ಮ ನಡವಳಿಕೆ ಹಾಗೂ ಆಲೋಚನೆಗಳು ಸೂಕ್ಷ್ಮತೆಯಿಂದ ಕೂಡಿದಾಗ ಮಾತ್ರ ನಮ್ಮನ್ನು ಸಮಾಜ ಒಪ್ಪಿಕೊಳ್ಳಲು ಸಾಧ್ಯ. ತ್ಯಾಗ, ಸದೃಢತೆ, ಸಂಯಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ತಿಳಿಸಿದರು.
ಮಮಧಪುರ ಶಾಖಾ ಮಠದ ಶ್ರೀ ಮೌನಮಲ್ಲಿನಾಥ ಸ್ವಾಮೀಜಿ, ಶ್ರೀ ಗೌರಿಶಂಕರ ಸ್ವಾಮೀಜಿ, ಶ್ರೀ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಇತರರಿದ್ದರು.