ಶಿವಮೊಗ್ಗದಲ್ಲಿ ಸ್ಪೆ ಸ್ ಜೆಟ್‌ಸೇವೆಗೆ ಶೀಘ್ರದಲ್ಲಿ ವಿರಾಮ! I spice jet

ಸ್ಪೈಸ್ ಜೆಟ್ ವಿಮಾನದ ಸಂಗ್ರಹ ಚಿತ್ರ
ಸ್ಪೈಸ್ ಜೆಟ್ ವಿಮಾನದ ಸಂಗ್ರಹ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮೂರು ಮಾರ್ಗಕ್ಕೆ ಅನ್ವಯ
  • ಈಗ ಉಳಿದಿರುವುದು ಸ್ಟಾರ್ ಏರ್‌ಲೈನ್ ಮಾತ್ರ
  • ಇಂಡಿಗೋ ಬಳಿಕ ಸ್ಪೈಸ್ ಜೆಟ್ ವಿದಾಯ
ಶಿವಮೊಗ್ಗ: ಮಧ್ಯಕರ್ನಾಟಕ ಜಿಲ್ಲೆಗಳಿಗೆ ವೈಮಾನಿಕ ಸೇವೆ ಒದಗಿಸುತ್ತಿದ್ದ ಶಿವಮೊಗ್ಗ (shivamogga) ಏರ್‌ಪೋರ್ಟ್‌ (airport) ಗೆ ಮತ್ತೆ ಆಘಾತ ಎದುರಾಗಿದೆ. ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದ ಇಂಡಿಗೋ ಸಂಸ್ಥೆ ಸೇವೆ ಸ್ಥಗಿತಗೊಳಿಸಿದ ಬೆನ್ನಲ್ಲೇ ಇದೀಗ ಸ್ಪೈಸ್ ಜೆಟ್ (spicejet)ಕೂಡ ಸೇವೆಗೆ ವಿರಾಮ ನೀಡಲು ಮುಂದಾಗಿದೆ.
ಪ್ರತಿನಿತ್ಯ ಹೈದರಾಬಾದ್-ಶಿವಮೊಗ್ಗ, ಶಿವಮೊಗ್ಗ-ಚೆನ್ನೈ, ಚೆನ್ನೈ-ಶಿವಮೊಗ್ಗ, ಶಿವಮೊಗ್ಗ-ಹೈದರಾಬಾದ್ ಜೂ.9ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸೇವೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿರುವ ನಡುವೆಯೇ ವಿಮಾನಕ್ಕೆ ಬಳಸುವ ಇಂಧನವೂ ದುಬಾರಿಯಾಗಿದೆ. ಹೀಗಾಗಿ ನಷ್ಟ ತಪ್ಪಿಸಲು ಸ್ಪೈಸ್ ಜೆಟ್ ಈ ತೀರ್ಮಾನ ಮಾಡಿದೆ ಎನ್ನಲಾಗಿದೆ.
ಈಗಾಗಲೇ ಏರ್ ಇಂಡಿಯಾ ಸಂಸ್ಥೆ ಸುಮಾರು 100 ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇವೆ ಸ್ಥಗಿತಗೊಳಿಸಿದೆ. ಸ್ಪೈಸ್ ಜೆಟ್ ಕೂಡ ಅನೇಕ ಕಡೆಗಳಲ್ಲಿ ಸೇವೆ ನಿಲ್ಲಿಸುವ ಮೂಲಕ ನಷ್ಟ ತಪ್ಪಿಸಿಕೊಳ್ಳಲು ಮುಂದಾಗಿದೆ. ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಇಂಡಿಗೂ ವಿಮಾನ ಮೇ 1ರಿಂದ ತನ್ನ ಸೇವೆಯನ್ನು ನಿಲ್ಲಿಸಿದೆ. ಈಗ ಸ್ಪೈಸ್ ಜೆಟ್ ಕೂಡ ತಾತ್ಕಾಲಿಕವಾಗಿ ಗುಡ್‌ಬೈ ಹೇಳುತ್ತಿದೆ.
ಸದ್ಯಕ್ಕೆ ಶಿವಮೊಗ್ಗ-ಬೆಂಗಳೂರು, ಶಿವಮೊಗ್ಗ-ಹೈದರಾಬಾದ್, ಶಿವಮೊಗ್ಗ-ಚೆನ್ನೈ ನಡುವೆ ಒಟ್ಟು ಮೂರು ಮಾರ್ಗಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. ಜೂ.9ರ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸುವ ಏಕೈಕ ವಿಮಾನಯಾನ ಸಂಸ್ಥೆಯಾಗಿ ಸ್ಟಾರ್ ಏರ್‌ಲೈನ್ ಉಳಿದುಕೊಳ್ಳಲಿದೆ. ಇದು ತಿರುಪತಿ-ಶಿವಮೊಗ್ಗ, ಶಿವಮೊಗ್ಗ-ಹೈದರಾಬಾದ್, ಶಿವಮೊಗ್ಗ-ಗೋವಾ ನಡುವೆ ಸಂಚರಿಸುತ್ತಿದೆ.
ಇಂಡಿಗೋ ಬಳಿಕ ಸ್ಪೈಸ್ ಜೆಟ್ ಕೂಡ ತಾತ್ಕಾಲಿಕ ವಿದಾಯ ಹೇಳುತ್ತಿರುವುದು ವಿಮಾನ ಸೌಕರ್ಯದ ದೃಷ್ಟಿಯಿಂದ ಹಿನ್ನಡೆಯೆಂದೇ ಹೇಳಲಾಗುತ್ತಿದೆ. ಏಕೆಂದರೆ ಇಂಧನ ಬಿಕ್ಕಟ್ಟು ಬಗೆಹರಿಯದಿದ್ದರೆ ತಾತ್ಕಾಲಿಕ ವಿದಾಯ ಶಾಶ್ವತವಾಗುವ ಅಪಾಯವೂ ಇದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net