ಕೆಎಫ್‌ಡಿ ಸೋಂಕಿತರ ಚಿಕಿತ್ಸೆಗೆ ವಿಶೇಷ ವಾರ್ಡ್ | KFD infection

ಸಾಗರದಲ್ಲಿ ಆಯೋಜಿಸಿದ್ದ ಕೆಎಫ್‌ಡಿ ಮತ್ತು ಪಲ್ಸ್ ಪೋಲಿಯೋ ಕುರಿತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ವಿರೇಶ್‌ಕುಮಾರ್, ರಶ್ಮಿ, ಶಿವಪ್ರಕಾಶ್, ಸದಾನಂದಸ್ವಾಮಿ, ಡಾ. ಹರ್ಷವರ್ಧನ್ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಕೆಎಫ್‌ಡಿ ಮತ್ತು ಪಲ್ಸ್ ಪೋಲಿಯೋ ಕುರಿತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ವಿರೇಶ್‌ಕುಮಾರ್, ರಶ್ಮಿ, ಶಿವಪ್ರಕಾಶ್, ಸದಾನಂದಸ್ವಾಮಿ, ಡಾ. ಹರ್ಷವರ್ಧನ್ ಇತರರಿದ್ದರು.
Published on
ಸಾಗರ: ತಾಲೂಕಿನಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿ ಈತನಕ 274 ರಕ್ತ ಮಾದರಿಗಳನ್ನು ಪರೀಕ್ಷೆ ಮಾಡಿದ್ದು, ಯಾವುದೇ ಸೋಂಕು ದೃಢಪಟ್ಟಿಲ್ಲ. ಹೊಸನಗರ ತಾಲೂಕಿನಲ್ಲಿ 169 ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ 8 ಪ್ರಕರಣ ಪತ್ತೆಯಾಗಿದೆ ಎಂದು ಸಾಗರ ಉಪವಿಭಾಗಾಧಿಕಾರಿ ವಿರೇಶ್‌ಕುಮಾರ್ ಹೇಳಿದರು.
ಎಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೆಎಫ್‌ಡಿ ಮತ್ತು ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಕುರಿತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಂಗನಕಾಯಿಲೆ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ. ಹೊಸನಗರ ತಾಲೂಕಿನ ಸೋನಲೆ ವ್ಯಾಪ್ತಿಯಲ್ಲಿ ಸೋಂಕು ಪತ್ತೆಯಾಗಿದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಜನರ ರಕ್ತಮಾದರಿ ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಸಾಗರ ಉಪವಿಭಾಗೀಯ ಅಸ್ಪತ್ರೆಯಲ್ಲಿ ಕೆಎಫ್‌ಡಿ ಸೋಂಕಿತರ ಚಿಕಿತ್ಸೆಗೆ 10 ಬೆಡ್‌ನ ವಿಶೇಷ ಘಟಕ ಆರಂಭಿಸಲಾಗಿದೆ. ಕೆಲವು ಪ್ರಮುಖ ಸ್ಥಳಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ನವೆಂಬರ್‌ನಿಂದ ಜೂನ್‌ವರೆಗೆ ಜ್ವರ, ವಾಂತಿ, ತಲೆನೋವು, ಮೈ-ಕೈ ನೋವು ಇನ್ನಿತರೆ ಲಕ್ಷಣಗಳು ಕಂಡುಬಂದರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಬೇಕು. ಎರಡ್ಮೂರು ದಿನಗಳಲ್ಲಿ ಕಡಿಮೆಯಾಗದೇ ಇದ್ದರೆ ಉಪವಿಭಾಗೀಯ ಅಸ್ಪತ್ರೆಗೆ ಬರಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಮಂಗನ ಕಾಯಿಲೆಗೆ ಸಂಬಂಧಿಸಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಉಪವಿಭಾಗೀಯ ಕೇಂದ್ರ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಯಶಸ್ವಿಯಾಗಿ ಮಾಡಲಾಗಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಿಸುವ ಮೂಲಕ ಮಕ್ಕಳನ್ನು ಅಂಗವೈಕಲ್ಯದಿಂದ ದೂರ ಮಾಡಬೇಕು. ಹನಿ ಹಾಕಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸೂಚಿಸಲಾಗಿದೆ ಎಂದರು.
ಶಿವಮೊಗ್ಗದ ವಿಡಿಎಲ್ ಮುಖ್ಯವೈದ್ಯಾಧಿಕಾರಿ ಹರ್ಷವರ್ಧನ್ ಮಾತನಾಡಿ, ಯಾವುದೇ ಪ್ರದೇಶದಲ್ಲಿ ಮಂಗಗಳು ಸಾವಿಗಿಡಾದರೆ ಗಂಭೀರವಾಗಿ ಪರಿಗಣಿಸಬೇಕು. ಅಂತಹ ಪ್ರದೇಶಗಳನ್ನು ಗುರುತಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಮಂಗಗಳ ಅಸಹಜ ಸಾವು ಎಚ್ಚರಿಕೆಯ ಗಂಟೆ ಎಂದು ಭಾವಿಸಬೇಕು. ಮಂಗಗಳ ಸಾವಿನ ವರದಿಯನ್ನು ತಕ್ಷಣ ಇಲಾಖೆಗೆ ನೀಡಬೇಕು. ಮಂಗನ ಕಾಯಿಲೆ ಪ್ರಸರಣ ತಡೆಯಲು ಮತ್ತು ನಿಯಂತ್ರಿಸಲು ಬಿಡುಗಡೆ ಮಾಡಿರುವ ನೂತನ ಮಾರ್ಗಸೂಚಿ ಮತ್ತು ಕ್ರಿಯಾ ಯೋಜನೆಯ ಸಂಪೂರ್ಣ ವಿವರ, ಸಚಿತ್ರ ಮಾಹಿತಿಯನ್ನು ಸಭೆಗೆ ನೀಡಿದರು.
ತಹಸೀಲ್ದಾರ್ ಜೆ.ಎಚ್.ರಶ್ಮಿ , ತಾಪಂ ಇಒ ಶಿವಪ್ರಕಾಶ್, ಬಿಇಇ ಸದಾನಂದಸ್ವಾಮಿ , ಡಾ. ರವೀಂದ್ರ, ಡಾ. ನಾಗರಾಜ ನಾಯ್ಕ್, ಡಾ. ಸುರೇಶ್, ದೇವರಾಜ್, ರಮೇಶ್, ಪಿಡಬ್ಲುೃಡಿ ಎಇ ಅನಿಲ್, ಅರಣ್ಯ, ಪಶುಪಾಲನಾ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net