ತಂದೆಯ ಜೀವ ಕಾಪಾಡಿದ ಮಗ | adventure

ಪತ್ನಿ, ಮಕ್ಕಳೊಂದಿಗೆ ಚಂದ್ರು.
ಪತ್ನಿ, ಮಕ್ಕಳೊಂದಿಗೆ ಚಂದ್ರು.
Published on
ಹೊಸನಗರ: ಆಕಸ್ಮಿಕ ಘಟನೆಗಳು ಸಂಭವಿಸಿದಾಗ ಬಹುತೇಕ ಸಂದರ್ಭ ದಿಕ್ಕೇ ತೋಚದಂತಾಗಿ ಧೃತಿಗೆಡುತ್ತಾರೆ. ಆದರೆ ತಾಲೂಕಿನ ಗೋರಗೋಡು ಗ್ರಾಮದ 9 ವರ್ಷದ ಬಾಲಕ ಜಿ.ಸಿ.ನಂದನ್ ತುರ್ತು ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ, ಸಾಹಸ ಮೆರೆದು ತನ್ನ ತಂದೆಯ ಪ್ರಾಣವನ್ನೇ ಕಾಪಾಡಿದ್ದಾನೆ.
ಇತ್ತೀಚೆಗೆ ನಂದನ್ ಮತ್ತು ತಂದೆ ಚಂದ್ರು ಗೊರಗೋಡು ಸಮೀಪದ ಹೊಳೆಯ ಬಳಿ ತೆರಳಿದ್ದರು. ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಬಂದು ಜಾರಿ ಹೊಳೆಗೆ ಬಿದ್ದಿದ್ದಾರೆ. ಹರಿಯುತ್ತಿದ್ದ ನೀರಿನಲ್ಲಿ ಸುಮಾರು 2 ಕಿಲೋಮೀಟರ್ ದೂರ ತೇಲಿ ಹೋಗಿದ್ದಾರೆ. ಇದರಿಂದ ನಂದನ್ ಭಯಪಡದೆ ಹೊಳೆಯ ದಡದ ಉದ್ದಕ್ಕೂ 2 ಕಿಲೋಮೀಟರ್ ಓಡುತ್ತಾ ತಂದೆಯನ್ನು ಹುಡುಕಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ, ‘ನನ್ನ ತಂದೆ ಹೊಳೆಯಲ್ಲಿ ತೇಲಿ ಹೋಗಿದ್ದಾರೆ, ಬನ್ನಿ ಕಾಪಾಡಿ’ ಎಂದು ನೆರವು ಕೋರಿದ್ದಾನೆ.
ತಕ್ಷಣ ಸ್ಥಳಕ್ಕೆ ಬಂದ ಗ್ರಾಮಸ್ಥರು ಹೊಳೆಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಹೊಳೆಯಲ್ಲಿ ಜರ್ಕಿನ್ ತೇಲುತ್ತಿತ್ತು. ಇದನ್ನು ಗುರುತಿಸಿ ಅದೇ ಸ್ಥಳದಲ್ಲಿ ತಂದೆ ಇರಬಹುದೆಂದು ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಚಂದ್ರು ಅವರನ್ನು ದಡಕ್ಕೆ ಎಳೆದುತಂದು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ತಂದೆ ಅಪಾಯದಲ್ಲಿದ್ದಾಗ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ನಡೆದುಕೊಂಡ ನಂದನ್ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ನಂದನ್ ಗೋರಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಚಂದ್ರು-ಗಾಯತ್ರಿ ದಂಪತಿಯ ಪುತ್ರ. ಚಂದ್ರು ದಿನಗೂಲಿ ಕಾರ್ಮಿಕನಾಗಿ ತೋಟದ ಕೆಲಸ ಮಾಡಿ ಕುಟುಂಬ ನಿರ್ವಹಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net