ಜೂ.20ರಿಂದ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ | SIR

ಶಿವಮೊಗ್ಗ ತಹಸೀಲ್ದಾರ್ ವಿ.ಎಸ್.ರಾಜೀವ್ ಮಾತನಾಡಿದರು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಬಿ.ಆರ್.ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ತಹಸೀಲ್ದಾರ್ ವಿ.ಎಸ್.ರಾಜೀವ್ ಮಾತನಾಡಿದರು. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಬಿ.ಆರ್.ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ
  • ಮತದಾರನ ಅರ್ಹತೆ ಪರಿಶೀಲಿಸಿ ದೃಢೀಕರಿಸಲಾಗುವುದು ಎಸ್‌ಐಆರ್ ಉದ್ದೇಶ
  • ಮತದಾರರ ನೋಂದಣಾಧಿಕಾರಿ ಬಿ.ಆರ್.ಮಂಜುನಾಥ ಹೇಳಿಕೆ
ಶಿವಮೊಗ್ಗ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್-Special Intensive Revision) ಕಾರ್ಯವು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ-111ರಲ್ಲಿ ಜೂ.20ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಬಿ.ಆರ್.ಮಂಜುನಾಥ ಹೇಳಿದರು.
249 ಮತಗಟ್ಟೆಗಳ ವ್ಯಾಪ್ತಿಯನ್ನು ಗ್ರಾಮಾಂತರ ಕ್ಷೇತ್ರ(Rural Constituency)ವು ಹೊಂದಿದ್ದು, 1,08,675 ಪುರುಷರು, 1,12,229 ಮಹಿಳೆಯರನ್ನು ಒಳಗೊಂಡಂತೆ 2,22,910 ಮತದಾರರಿದ್ದು ಅಕ್ಟೋಬರ್ 1ಅನ್ನು ಅರ್ಹತಾ ದಿನವನ್ನಾಗಿ ಪರಿಗಣಿಸಿ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್‌ಐಆರ್(SIR) ಎಂಬುದು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆಗಿದ್ದು, ಭಾರತೀಯ ಚುನಾವಣಾ ಆಯೋಗವು ನಡೆಸಿತ್ತಿದೆ. ಮತದಾರರ ಪಟ್ಟುಯನ್ನು ನಿಖರ ಮತ್ತು ನವೀಕೃತವಾಗಿಡುವುದು. ಮತದಾರನ ಅರ್ಹತೆಯನ್ನು ಪರಿಶೀಲಿಸಿ ದೃಢೀಕರಿಸಲಾಗುವುದು ಇದರ ಉದ್ದೇಶವಾಗಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಶೇ.91.32ರಷ್ಟು ಮತದಾರರ ಮ್ಯಾಪಿಂಗ್ ಮಾಡಲಾಗಿದೆ. 19,180 ಮತದಾರರ ಮ್ಯಾಪಿಂಗ್ ಬಾಕಿ ಇದೆ. 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಬಿಎಲ್‌ಒಗಳಿಗೆ ನೀಡಿ ಮ್ಯಾಪಿಂಗ್ ಮಾಡಿಕೊಳ್ಳಬಹುದು ಎಂದು ಹೇಳಿದರು.
ರಾಜಕೀಯ ಪಕ್ಷ(Political party)ಗಳ ಸಹಭಾಗಿತ್ವ: ಕ್ಷೇತ್ರದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ 996 ಬೂತ್‌ಮಟ್ಟದ ಏಜೆಂಟರು(ಬಿಎಲ್‌ಎ-BLA) ಈ ಪ್ರಕ್ರಿಯೆಯಲ್ಲಿ ಭಾಗವಹಿಸುವರು. ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆ ಕಾಪಾಡಲು ಇವರ ಸಹಕಾರ ಪಡೆಯಲಾಗುತ್ತಿದೆ ಎಂದರು.
ಹೊಸ ಮತದಾರ(New voter)ರ ಸೇರ್ಪಡೆಗೆ ಫಾರಂ 6, ಬೇರೆ ರಾಜ್ಯದಿಂದ ಬಂದವರು ತಮ್ಮ ನಿವಾಸವನ್ನು ವರ್ಗಾಯಿಸಲು ಬಯಸುವವರು ಫಾರಂ 8ರ ಜತೆಗೆ ಒಂದು ಘೋಷಣಾ ನಮೂನೆಯನ್ನು ಸಲ್ಲಿಸುವಂತೆ ಹಾಗೂ ಹೆಸರು ತೆಗೆದುಹಾಕಲು ಆಕ್ಷೇಪಣೆ ಫಾರಂ 7 ಮತ್ತು ತಿದ್ದುಪಡಿಗಾಗಿ ಫಾರಂ 8ರ ಅರ್ಜಿಗಳನ್ನು ಸಲ್ಲಿಸಲು ಮಾರ್ಗದರ್ಶನ ನೀಡುವರು. ಜತೆಗೆ ದಿನಕ್ಕೆ 50 ನಮೂನೆಗಳನ್ನು ಮಾತ್ರ ಬಿಎಲ್‌ಒಗೆ ಸಲ್ಲಿಸಬಹುದು. ಕರಡು ಪ್ರಕಟಣೆ ನಂತರ ದಿನಕ್ಕೆ 10 ನಮೂನೆ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು. 
ಮತದಾರರ ಪಟ್ಟಿ ಹಾಗೂ ಪರಿಷ್ಕರಣೆ ಸಂಬಂಧಿತ ಮಾಹಿತಿಯನ್ನು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್(Official website), ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿ ಪಡೆಯಬಹುದು. ಜಿಲ್ಲಾ ಚುನಾವಣಾಧಿಕಾರಿಗಳು ಸಾರ್ವಜನಿಕರು ಬಿಎಲ್‌ಎಗಳಿಗೆ ಅಗತ್ಯ ಸಹಕಾರ ನೀಡುವಂತೆ ಹಾಗೂ ಮತದಾರರ ಮಾಹಿತಿಯನ್ನು ಸರಿಯಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ ಎಂದರು.

ಬಿಎಲ್‌ಒಗಳ ಮನೆ ಮನೆಗೆ ಭೇಟಿ

ಜೂ.20ರಿಂದ 29ರವರೆಗೆ ಎಸ್‌ಐಆರ್‌ಗೆ ಸಿದ್ಧತೆ, ತರಬೇತಿ ಹಾಗೂ ಮುದ್ರಣ ಕಾರ್ಯ ನಡೆಯಲಿದೆ. ಜೂ.30ರಿಂದ ಜು.29ರವರೆಗೆ ಎರಡು ಹಂತದಲ್ಲಿ ಬೂತ್ ಮಟ್ಟದ ಅಧಿಕಾರಿ(ಬಿಎಲ್‌ಒ)ಗಳು ಮನೆ ಮನೆಗೆ ಭೇಟಿ ನೀಡುವರು. ಜು.29ರೊಳಗೆ ಮತಗಟ್ಟೆ(Polling station)ಗಳ ಮರುಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಆಗಸ್ಟ್ 5ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಣೆ ಹೊರಡಿಸಲಾಗುವುದು. ಆಗಸ್ಟ್ 5ರಿಂದ ಸೆಪ್ಟಂಬರ್ 4ವರೆಗೆ ಆಕ್ಷೇಪಣೆ ಹಾಗೂ ಅರ್ಜಿಗಳ ಸಲ್ಲಿಕೆಗೆ ಅವಕಾಶವಿರಲಿದೆ. ಅಕ್ಟೋಬರ್ 3ರವರೆಗೆ ಅರ್ಜಿಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಲಿದ್ದು, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಹೊರಬೀಳಲಿದೆ ಎಂದು ಶಿವಮೊಗ್ಗ ತಹಸೀಲ್ದಾರ್ ವಿ.ಎಸ್.ರಾಜೀವ್ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net