ಸಿಗಂದೂರು ಸೇತುವೆಗೆ ವರ್ಷದ ಸಂಭ್ರಮ | Sigandur Bridge

ಸಿಗಂದೂರು ಸೇತುವೆ ಉದ್ಘಾಟನೆಯಾಗಿ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಕರೂರು ಹೋಬಳಿ ಪ್ರಮುಖರು ಸೇತುವೆ ಮೇಲೆ ಸಂಭ್ರಮಾಚರಣೆ ನಡೆಸಿದರು. ಪ್ರಸನ್ನ ಕೆರೆಕೈ, ಕೆ.ಜಿ.ಪ್ರಶಾಂತ್, ಮಂಜಯ್ಯ, ಗಣಪತಿ, ಸಂತೋಷ, ಸಚಿನ್ ಇತರರಿದ್ದರು.
ಸಿಗಂದೂರು ಸೇತುವೆ ಉದ್ಘಾಟನೆಯಾಗಿ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಕರೂರು ಹೋಬಳಿ ಪ್ರಮುಖರು ಸೇತುವೆ ಮೇಲೆ ಸಂಭ್ರಮಾಚರಣೆ ನಡೆಸಿದರು. ಪ್ರಸನ್ನ ಕೆರೆಕೈ, ಕೆ.ಜಿ.ಪ್ರಶಾಂತ್, ಮಂಜಯ್ಯ, ಗಣಪತಿ, ಸಂತೋಷ, ಸಚಿನ್ ಇತರರಿದ್ದರು.
Published on
ತುಮರಿ: ಸಿಗಂದೂರು ಸೇತುವೆ ಕೇವಲ ಕಾಂಕ್ರೀಟ್ ರಚನೆಯಲ್ಲ. ಇದು ಹಿನ್ನೀರಿನ ಜನರ ದಶಕಗಳ ಕಣ್ಣೀರು ಮತ್ತು ಸತತ ಹೋರಾಟದ ಪ್ರತಿಫಲ ಎಂದು ಸೇತುವೆ ಹೋರಾಟ ಸಮಿತಿ ಪ್ರಮುಖ, ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಹೇಳಿದರು.
ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾದ ಸಿಗಂದೂರು ಸೇತುವೆ ಉದ್ಘಾಟನೆಯಾಗಿ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಕರೂರು ಹೋಬಳಿಯ ನಾಗರಿಕರು ಸೋಮವಾರ ಸೇತುವೆ ಮೇಲೆ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಕಾಲದಲ್ಲಿ ಲಾಂಚ್‌ಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದ ದಿನಗಳು, ತುರ್ತು ಚಿಕಿತ್ಸೆ ಸಿಗದೆ ಅನುಭವಿಸಿದ ಯಾತನೆಗಳು ಇಂದಿಗೂ ಕಣ್ಣಮುಂದೆ ಬರುತ್ತವೆ. ಈ ಸೇತುವೆ ನಿರ್ಮಾಣಕ್ಕಾಗಿ ನಡೆಸಿದ ನಿರಂತರ ಧರಣಿಗಳು, ಸರ್ಕಾರದ ಗಮನ ಸೆಳೆಯಲು ಪಟ್ಟಪಾಡು ಅಷ್ಟಿಷ್ಟಲ್ಲ. ಇಂದು ಈ ಸೇತುವೆ ಕರೂರು ಹೋಬಳಿಯ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ. ಇದಕ್ಕೆ ಸಹಕರಿಸಿದ ಪ್ರತಿಯೊಬ್ಬ ಹೋರಾಟಗಾರರಿಗೂ, ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಸಂಪರ್ಕ ಕ್ರಾಂತಿಯು ಕರೂರು ಹೋಬಳಿಯ ಭಾಗದಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಹಿಂದೆ ಲಾಂಚ್ ಇದ್ದಾಗ ನೀರಿನ ಹರಿವು ಇಲ್ಲದ ಸಮಯದಲ್ಲಿ ಲಾಂಚ್ ಸ್ಥಗಿತಗೊಂಡು ಜನರಿಗೆ ಸಾಕಷ್ಟು ಅನಾನುಕೂಲ ಉಂಟಾಗುತ್ತಿತ್ತು. ಲಾಂಚ್ ನಿಲ್ದಾಣದಿಂದ ನಡೆದು ಬಂದು ಮಹಿಳೆಯರು, ವೃದ್ಧರು ತೀವ್ರ ಸಾಹಸ ಪಟ್ಟು ಬಸ್ ಏರಬೇಕಾದ ದುಸ್ಥಿತಿ ಇತ್ತು ಎಂದು ನೆನಪಿಸಿಕೊಂಡರು.
ಪ್ರಮುಖರಾದ ಕೆ.ಜಿ.ಪ್ರಶಾಂತ್, ಮಂಜಯ್ಯ, ಗಣಪತಿ, ಸಂತೋಷ, ಸಚಿನ್, ಅಣ್ಣಪ್ಪ, ಸಿರಿ, ಮಂಜುನಾಥ್, ಸಾವಿತ್ರಿ ಶಿವರಾಜ್, ಅರುಣ್, ಮಂಜುನಾಥ, ಗಣಪತಿ, ಸನ್ಮಾನ್, ಶ್ರೀಧರ್, ಕರೂರು ಹೋಬಳಿಯ ಹಿರಿಯರು, ಯುವಕರು ಇತರರಿದ್ದರು.

ಸಿಹಿ ಹಂಚಿ ಸಂಭ್ರಮಾಚರಣೆ

ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಕರೂರು-ಬಾರಂಗಿ ಹೋಬಳಿ ಜನರ ದಶಕಗಳ ಕಾಲದ ಕನಸಾಗಿದ್ದ ಸಿಗಂದೂರು ಸೇತುವೆಯು ಲೋಕಾರ್ಪಣೆಯಾಗಿ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ದ್ವೀಪದ ನಿವಾಸಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸೇತುವೆಯ ಮೇಲೆ ಜಮಾಯಿಸಿದ ನೂರಾರು ನಾಗರಿಕರು ಪರಸ್ಪರ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಪ್ರವಾಸಿಗರು ಮತ್ತು ಸ್ಥಳೀಯರ ಸಮ್ಮುಖದಲ್ಲಿ ಇಡೀ ಸೇತುವೆಯು ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಯಿತು. ಕತ್ತಲಾಗುತ್ತಿದ್ದಂತೆ ಸೇತುವೆಯ ಮೇಲಿನ ವಿದ್ಯುತ್ ದೀಪಗಳ ಝಗಮಗಿಸುವ ಬೆಳಕಿನಲ್ಲಿ ಪಟಾಕಿಗಳ ಚಿತ್ತಾರ ಮೂಡಿತು. ಸೇತುವೆ ಹೋರಾಟಕ್ಕೆ ಯಾರ‌್ಯಾರು ಶ್ರಮಿಸಿದ್ದಾರೋ ಅವರ ಕಾರ್ಯ ಸ್ಮರಣೀಯ ಎಂದು ಕೊಂಡಾಡಿದರು. ಪ್ರಮುಖರ ಸುದೀರ್ಘ ಹೋರಾಟ ಮತ್ತು ನಾಯಕತ್ವದಿಂದಾಗಿ ಇಂದು ಈ ಭಾಗದ ಜನರಿಗೆ ಶಾಶ್ವತ ಸಂಪರ್ಕ ಸಿಕ್ಕಂತಾಗಿದೆ. ಇದೇ ಸಂದರ್ಭದಲ್ಲಿ ಅ.ನಾ ಚಂದ್ರಶೇಖರ್ ಹಾಗೂ ಪ್ರದೀಪ್ ಅವರು ‘ಸೇತುವೆ ಬಂತು ಸಂತಸ ತಂತು’ ಗೀತೆಯನ್ನು ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net