ಶಿವಶರಣರ ವಚನಗಳು ಜ್ಞಾನದ ಸಂಕೇತ | Conference

ಶಿಕಾರಿಪುರದಲ್ಲಿ ಆಯೋಜಿಸಿದ್ದ 7ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.  ಸುಭಾಶ್ಚಚಂದ್ರ ಸ್ಥಾನಿಕ್, ಶ್ರೀ ಚನ್ನಬಸವ ಸ್ವಾಮೀಜಿ, ಮಾತೆ ಶರಣಾಂಬಿಕೆ, ಶಶಿಧರ್ ಸ್ವಾಮಿ, ಕೆ.ಎಸ್.ಗುರುಮೂರ್ತಿ, ಬಿ.ಪಾಪಯ್ಯ, ಜಗದೀಶ್ ಅಂಗಡಿ, ಎಚ್.ಎಸ್.ರಘು ಇತರರಿದ್ದರು.
ಶಿಕಾರಿಪುರದಲ್ಲಿ ಆಯೋಜಿಸಿದ್ದ 7ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಸುಭಾಶ್ಚಚಂದ್ರ ಸ್ಥಾನಿಕ್, ಶ್ರೀ ಚನ್ನಬಸವ ಸ್ವಾಮೀಜಿ, ಮಾತೆ ಶರಣಾಂಬಿಕೆ, ಶಶಿಧರ್ ಸ್ವಾಮಿ, ಕೆ.ಎಸ್.ಗುರುಮೂರ್ತಿ, ಬಿ.ಪಾಪಯ್ಯ, ಜಗದೀಶ್ ಅಂಗಡಿ, ಎಚ್.ಎಸ್.ರಘು ಇತರರಿದ್ದರು.
Published on
ಶಿಕಾರಿಪುರ: ಶರಣರ ಆಶಯಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಬೇಕು. ಶರಣ ಸಾಹಿತ್ಯ ನಮ್ಮ ಬದುಕಿನಲ್ಲಿ ಹೊಸಬೆಳಕು ಮೂಡಿಸುವಂತಹ ಶ್ರೇಷ್ಠ ಸಾಹಿತ್ಯ ಎಂದು ಶರಣ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸುಭಾಶ್ಚಂದ್ರ ಸ್ಥಾನಿಕ್ ಹೇಳಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ 7ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕಾರಿಪುರ ತಾಲೂಕು ಶರಣರ ನಾಡು, ವಚನಗಾರ್ತಿ ಅಕ್ಕಮಹಾದೇವಿ, ಸತ್ಯಕ್ಕ, ಮುಕ್ತಾಯಕ್ಕ, ಶೂನ್ಯ ಸಿಂಹಾಸ ನಾಧೀಶ ಅಲ್ಲಮಪ್ರಭು, ಅನಿಮಿಷಾರ್ಯ ಸೇರಿ ಇಪ್ಪತ್ತಕ್ಕೂ ಹೆಚ್ಚು ಶರಣರಿಗೆ ಜನ್ಮನೀಡಿದ ಪುಣ್ಯದ ನೆಲವಿದು ಎಂದರು.
ಸಾಕಷ್ಟು ಶರಣರ ವಚನ ಸಾಹಿತ್ಯ ಇಂದಿಗೂ ಲಭ್ಯವಾಗಿಲ್ಲ. ಸಿಕ್ಕಂತಹ ಶರಣರ ವಚನ ಭಂಡಾರವನ್ನು ನಮ್ಮ ಮುಂದಿನ ಪೀಳಿಗೆಗಾಗಿ ನಾವು ರಕ್ಷಿಸಿ ಇಡಬೇಕು. ನಮ್ಮದು ಶರಣ ಪರಂಪರೆ. ಶರಣರು ನುಡಿದಂತೆ ನಡೆದಂತಹ ಪರಿಶುಭ್ರ ಮನಸ್ಸಿನವರು. ಅವರ ಕಾಯಕ, ದಾಸೋಹ, ಸಹಬಾಳ್ವೆ ಎಂಬ ಮೂರು ಮಂತ್ರಗಳು ಬದುಕನ್ನು ಬದಲಿಸಬಲ್ಲವು ಎಂದು ತಿಳಿಸಿದರು.
ಪ್ರತಿ ಮನೆಯಲ್ಲೂ ಶರಣ ಸಾಹಿತ್ಯದ ಭಂಡಾರ ಇರಬೇಕು. ವಚನ ಸಾಹಿತ್ಯವೆಂದರೆ ಕನ್ನಡದ ಶ್ರೇಷ್ಠ ಚಿಂತನೆಯ, ಸದ್ವಿಚಾರಗಳ ಸುಗಂಧ ಬೀರುವ, ಮಾನವೀಯ ಮೌಲ್ಯಗಳನ್ನು ಸಾರುವ ಸಾಹಿತ್ಯ. ಶರಣರ ಜನ್ಮಸ್ಥಾನಗಳು ಅಭಿವೃದ್ಧಿ ಕಾಣಬೇಕು. ಶರಣ ಪರಂಪರೆಯನ್ನು ಮನಮನಕ್ಕೆ ಮುಟ್ಟಿಸಬೇಕು. ಶರಣರ ತತ್ವಗಳ ವಾಸ್ತವತೆಯನ್ನು ಜನತೆಗೆ ತಲುಪಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.
ಬಸವಾದಿ ಶರಣರು ಕಟ್ಟಿದ ಅನುಭವ ಮಂಟಪ ಸರ್ವ ಸಮುದಾಯಗಳ ತವರಾಗಿತ್ತು. ಅಲ್ಲಿ ಮೇಲು-ಕೀಳು, ಬಡವ-ಸಿರಿವಂತ,  ಪಂಡಿತ-ಪಾಮರ ಎಂಬ ಭೇದವೇ ಇರಲಿಲ್ಲ. ಪ್ರತಿ ಶರಣರೂ ದಿಟ್ಟತನದಿಂದ ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ, ತಮ್ಮ ನಡೆಯ ಮೂಲಕ ತಿದ್ದುವ ಕೆಲಸ ಮಾಡಿದ್ದಾರೆ. ಶರಣರ ಆಶಯಗಳಿಗೆ ನಾವೆಲ್ಲರೂ ದನಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವೈರುಧ್ಯಗಳ ನಡುವೆ ಸಮ ಸಮಾಜದ ನಿರ್ಮಾಣದ ಅಗತ್ಯವಿದೆ. ಸಾಮಾಜಿಕ ಕ್ರಾಂತಿ ನಡೆದ 12ನೇ ಶತಮಾನವನ್ನು ಇಡೀ ನಾಡು ನಿಬ್ಬೆರಗಾಗಿ ನೋಡಿತು. ಅವರ ವಿಶ್ವಬಂಧುತ್ವ, ವಿಶ್ವಮಾನವ ಸಂದೇಶಗಳು ಎಂದಿಗೂ ಪ್ರಸ್ತುತ. ಶರಣರು ಸಹನೆ, ಶಾಂತಿ, ಸಂಯಮಗಳ ಸಾಕಾರಮೂರ್ತಿಗಳಾಗಿದ್ದರು ಎಂದು ಶಾಸಕ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಶಿಧರ್ ಸ್ವಾಮಿ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿ.ಡಿ.ಭೂಕಾಂತ್, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ, ಜಗದೀಶ್ ಅಂಗಡಿ, ಹುಲಿಕೆರೆ ವೀರೇಶ್, ಎಚ್.ಜಿ.ಮೃತ್ಯುಂಜಯ, ಬೇಗೂರು ಮಂಜಣ್ಣ, ನಾಗರಾಜ್, ಪರಮೇಶ್ವರಪ್ಪ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ರಘು, ಕೆ.ಎಚ್.ಪುಟ್ಟಪ್ಪ, ಶಿವಾನಂದಪ್ಪ, ಜನಪದ ಕಲಾವಿದ ಚೌಟಗಿ ಪರಶುರಾಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net