20ರಂದು ಶಿವಮೊಗ್ಗ ಯೋಧಾಸ್ ತಂಡದ ವಿಜಯೋತ್ಸವ | Maharaja Trophy

ಕೆಎಸ್‌ಸಿಎ ವಲಯ ಸಂಚಾಲಕ, ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿದರು. ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿಸ್, ಎಚ್.ಎಸ್.ಸದಾನಂದ್, ಡಿ.ಆರ್.ನಾಗರಾಜ್, ಐಡಿಯಲ್ ಗೋಪಿ, ಯಶವಂತ್ ನಾಯ್ಕ್, ಚಂದನ್ ಸುದ್ದಿಗೋಷ್ಠಿಯಲ್ಲಿದ್ದರು.
ಕೆಎಸ್‌ಸಿಎ ವಲಯ ಸಂಚಾಲಕ, ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿದರು. ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿಸ್, ಎಚ್.ಎಸ್.ಸದಾನಂದ್, ಡಿ.ಆರ್.ನಾಗರಾಜ್, ಐಡಿಯಲ್ ಗೋಪಿ, ಯಶವಂತ್ ನಾಯ್ಕ್, ಚಂದನ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ಶಿವಮೊಗ್ಗ ಯೋಧಾಸ್ ತಂಡ
  • ಬೆಕ್ಕಿನಕಲ್ಮಠದಿಂದ ಕೆಎಸ್‌ಸಿಎ ಮೈದಾನದವರೆಗೆ ಅದ್ಧೂರಿ ಮೆರವಣಿಗೆ
  • ಕೆಎಸ್‌ಸಿಎ ವಲಯ ಸಂಚಾಲಕ, ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿಕೆ
ಶಿವಮೊಗ್ಗ: ಮಹಾರಾಜ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ಶಿವಮೊಗ್ಗ ಯೋಧಾಸ್(Shivamogga Yodhas) ತಂಡಕ್ಕೆ ಜು.20ರಂದು ಸಂಜೆ 6ಕ್ಕೆ ಅದ್ಧೂರಿ ಸ್ವಾಗತ ಹಾಗೂ ವಿಜಯೋತ್ಸವ(Victory Celebration) ಮೆರವಣಿಗೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವಲಯ ಸಂಚಾಲಕ, ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿದರು.
ಮಹಾರಾಜ ಟ್ರೋಫಿ(Maharaja Trophy)ಯಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಗುಲ್ಬರ್ಗ ಮಿಸ್ಟಿಕ್ಸ್, ಮೈಸೂರು ವಾರಿಯರ್ಸ್, ಬೆಂಗಳೂರು ಬ್ಲಾಸ್ಟರ್ಸ್ ಸೇರಿ ಹಲವು ಬಲಿಷ್ಠ ತಂಡಗಳ ನಡುವೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಶಿವಮೊಗ್ಗ ಯೋಧಾಸ್ ತಂಡ ಪ್ರಶಸ್ತಿ ಗೆದ್ದಿದೆ. ಅದರ ಅಂಗವಾಗಿ ಆಟಗಾರರನ್ನು ಉತ್ತೇಜಿಸಲು ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಕ್ಕಿನಕಲ್ಮಠದಿಂದ ಸಂಜೆ 6ಕ್ಕೆ ಕೆಎಸ್‌ಸಿಎ ಮೈದಾನದವರೆಗೆ ಅದ್ಧೂರಿ ವಿಜಯೋತ್ಸವ ಮೆರವಣಿಗೆ ನಡೆಸಲಾಗುವುದು. ರಾತ್ತಿ 7ಕ್ಕೆ ಕೆಎಸ್‌ಸಿಎ ಮೈದಾನದಲ್ಲಿ ನಡೆಯುವ ವಿಜಯೋತ್ಸವದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಎಸ್‌ಪಿ ಬಿ.ನಿಖಿಲ್ ಸೇರಿ ಜನಪ್ರತಿನಿಧಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸುವರು ಎಂದರು.
ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್, ಬೆಂಗಳೂರು ಬ್ಲಾಸ್ಟರ್ಸ್ ತಂಡ(Bangalore Blasters team)ವನ್ನು ಮಣಿಸಿ ಚಾಂಪಿಯನ್ ಪಟ್ಟ(Champion title) ಅಲಂಕರಿಸಿತು. ಸುಮಾರು 17 ವರ್ಷಗಳ ಬಳಿಕ ಶಿವಮೊಗ್ಗದ ತಂಡ ಟ್ರೋಫಿ ಗೆದ್ದಿರುವುದು ಜಿಲ್ಲೆಯ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದ ಅವರು, ತಂಡದ ಸಿಇಒ ಮಿಥುನ್ ಅವರ ನೇತೃತ್ವದಲ್ಲಿ ಉದ್ಯಮಿ ಅಭಿಷೇಕ್ ಅಗರ್ವಾಲ್(Businessman Abhishek Agarwal) ಫ್ರಾಂಚೈಸಿ ಮೂಲಕ ತಂಡವನ್ನು ಖರೀದಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಎಂದರು.
ಟ್ರೋಫಿಯ ಬಹುಮಾನ ಮೊತ್ತ 15 ಲಕ್ಷ ರೂ.ದಲ್ಲಿ ಶಿವಮೊಗ್ಗದ ಕ್ರಿಕೆಟಿಗೆ ಎಸ್.ಎಲ್.ಅಕ್ಷಯ್ ಅವರ ಕುಟುಂಬಕ್ಕೆ 5 ಲಕ್ಷ ರೂ. ಧನಸಹಾಯ ನೀಡಲಾಗುವುದು. ಅಲ್ಲದೆ, ಐಸಿಎಸ್ ಮೊಬೈಲ್ ಪ್ರೈವೇಟ್ ಲಿಮಿಟೆಡ್‌(ICS Mobile Private Limited)ನಿಂದ ಅಕ್ಷಯ್ ಅವರ ಮಗಳಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷ ನಾಗೇಂದ್ರ ಕೆ. ಪಂಡಿಸ್, ಎಚ್.ಎಸ್.ಸದಾನಂದ್, ಡಿ.ಆರ್.ನಾಗರಾಜ್, ಐಡಿಯಲ್ ಗೋಪಿ, ಯಶವಂತ್ ನಾಯ್ಕ್, ಚಂದನ್ ಸುದ್ದಿಗೋಷ್ಠಿಯಲ್ಲಿದ್ದರು.

ಶಿವಮೊಗ್ಗದಲ್ಲೂ ಪಂದ್ಯ ಆಯೋಜನೆಗೆ ಒತ್ತು

ಮುಂದಿನ ದಿನಗಳಲ್ಲಿ ಕೆಪಿಎಲ್ ಮಾದರಿ ಮಹಾರಾಜ ಟ್ರೋಫಿಯ ಪಂದ್ಯಗಳನ್ನು ಆಯೋಜನೆ ಮಾಡುವ ಸಂಬಂಧ ಒತ್ತು ನೀಡಲಾಗುತ್ತಿದೆ. ಅದಕ್ಕೆ ಫ್ಲೆಡ್‌ಲೈಟ್(Floodlight) ಅವಶ್ಯವಾಗಿದ್ದು, ಒಂದು ವರ್ಷದೊಳಗೆ ಫ್ಲೆಡ್‌ಲೈಟ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಮಳೆಗಾಲದಲ್ಲಿ ಆಟಗಾರರಿಗೆ ತರಬೇತಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಳಾಂಗಣ ಕ್ರೀಡಾಂಗಣ(Indoor stadium)ನಿರ್ಮಾಣ ಮಾಡಲಾಗುತ್ತಿದೆ ಎಂದು ಡಿ.ಎಸ್.ಅರುಣ್ ಹೇಳಿದರು. ಅಲ್ಲದೆ, ಪೆಸಿಟ್ ಹಾಗೂ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜುಗಳ ಕ್ರೀಡಾಂಗಣಗಳನ್ನು ಬಳಕೆ ಜತೆಗೆ ನಿರ್ವಹಣೆ ಮಾಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು.

ಇನ್ಮುಂದೆ ಮೈದಾನದಲ್ಲಿ ನೀರು ನಿಲ್ಲಲ್ಲ

ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ ಕೆಎಸ್‌ಸಿಎ ಮೈದಾನಗಳು ಜಲಾವೃತಗೊಳ್ಳುತ್ತಿದ್ದವು. ಆದರೆ ಹಾರಿಜಾಂಟಲ್ ಡ್ರಿಲ್(Horizontal drill) ಮಾಡಿದ ಬಳಿಕ 2025ರಲ್ಲಿ ಒಂದು ದಿನವೂ ಮೈದಾನಲ್ಲಿ ನೀರು ನಿಂತಿಲ್ಲ ಎಂದು ಸ್ಪಷ್ಟಪಡಿಸಿದ ಡಿ.ಎಸ್.ಅರುಣ್, ಮಹಾನಗರ ಪಾಲಿಕೆಯಿಂದ 5.80 ಕೋಟಿ ರೂ. ವೆಚ್ಚದಲ್ಲಿ ನವುಲೆ ಕೆರೆ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಎರಡ್ಮೂರು ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
"

ಪ್ರಸಕ್ತ ವರ್ಷದಿಂದ ಮಹಾರಾಣಿ ಕಪ್ ಆಯೋಜಿಸುತ್ತಿದ್ದು, ಜು.22ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ಆರಂಭಗೊಳ್ಳಲ್ಲಿವೆ. ಒಟ್ಟು 4 ತಂಡಗಳು ಭಾಗವಹಿಸುತ್ತಿದ್ದು, ಶಿವಮೊಗ್ಗದ ನಾಲ್ವರು ಆಟಗಾರ್ತಿಯರು ಮಹಾರಾಣಿ ಕಪ್‌ನಲ್ಲಿ ವಿವಿಧ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ.

— ಡಿ.ಎಸ್.ಅರುಣ್, ಕೆಎಸ್‌ಸಿಎ ವಲಯ ಸಂಚಾಲಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net