ಅಹವಾಲು ಸ್ವೀಕಾರಕ್ಕೆ ಪ್ರತ್ಯೇಕ ಕಚೇರಿ ಆರಂಭ I separate office

 ಮೊಹಮ್ಮದ್ ತಬ್ರೇಝ್ ಆಲಂ ಶರೀಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ರಭುಲಿಂಗ ಕವಳಿಕಟ್ಟಿ, ಅಜ್ಜಯ್ಯ, ವಿ.ಅಭಿಷೇಕ್, ಪ್ರಸನ್ನಕೃಷ್ಣ ಪಟಗಾರ್ ಇದ್ದರು.
ಮೊಹಮ್ಮದ್ ತಬ್ರೇಝ್ ಆಲಂ ಶರೀಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ರಭುಲಿಂಗ ಕವಳಿಕಟ್ಟಿ, ಅಜ್ಜಯ್ಯ, ವಿ.ಅಭಿಷೇಕ್, ಪ್ರಸನ್ನಕೃಷ್ಣ ಪಟಗಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗ - ಧಾರವಾಡದಲ್ಲಿ ನೂತನ ಕಚೇರಿ
  • ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರ ಘೋಷಣೆ
ಶಿವಮೊಗ್ಗ: ಪಶ್ಚಿಮಘಟ್ಟಗಳ (western ghat) ವ್ಯಾಪ್ತಿಯ ಜನರ ಅಹವಾಲು ಆಲಿಸಲು ಶಿವಮೊಗ್ಗ (shivamogga) ಹಾಗೂ ಧಾರವಾಡದಲ್ಲಿ ಪ್ರತ್ಯೇಕ ಕಚೇರಿ (office) ಆರಂಭಿಸಲಾಗುವುದು ಎಂದು ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಮೊಹಮ್ಮದ್ ತಬ್ರೇಝ್ ಆಲಂ ಶರೀಫ್ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾರ್ಯಪಡೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇದೆ. ಹೀಗಾಗಿ ಪಶ್ಚಿಮಘಟ್ಟ ವ್ಯಾಪ್ತಿಯ ಜನರಿಗೆ ಅಹವಾಲು ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಎರಡು ಪ್ರತ್ಯೇಕ ಕಚೇರಿ ತೆರೆಯಲಾಗುವುದು ಎಂದು ಹೇಳಿದರು.
ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ಶಿವಮೊಗ್ಗ ತಾಲೂಕಿನ ಮಲೆಶಂಕರದಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು. ಮುಂದಿನ ತಿಂಗಳು ಮಲೆಶಂಕರದಲ್ಲಿ ಸಭೆ ನಡೆಸಲಾಗುವುದು. ಅಲ್ಲಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಕುಡಿಯುವ ನೀರಿನ ಸಮಸ್ಯೆ, ಬುಡಕಟ್ಟು ಜನಾಂಗದ ಕುಂದುಕೊರತೆ ಸೇರಿದಂತೆ ಅಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಶ್ಚಿಮ ಘಟ್ಟಗಳನ್ನು ಹೊಂದಿರುವ 6 ರಾಜ್ಯಗಳ ಪೈಕಿ ಪಶ್ಚಿಮ ಘಟ್ಟಗಳ ಸಂರಕ್ಷಣೆಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ. ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ಪ್ರತ್ಯೇಕ ಕಾರ್ಯಪಡೆ ರಚಿಸಿದ ಮೊದಲ ರಾಜ್ಯ ನಮ್ಮದು. 2008ರಲ್ಲಿ ಕಾರ್ಯಪಡೆ ರಚನೆಯಾಗಿದೆ. ವನ್ಯಜೀವಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನಗಳನ್ನು ಘೋಷಿಸುವ ಮೂಲಕ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಡಿಸಿಎಫ್ ಅಜ್ಜಯ್ಯ, ಪ್ರಸನ್ನ ಕೃಷ್ಣ ಪಟಗಾರ್ ಮುಂತಾದವರು ಈ ಸಂದರ್ಭದಲ್ಲಿದ್ದರು.

ಸಮಗ್ರ ವರದಿ ಸಲ್ಲಿಕೆ

ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿದೆ. ಮುಖ್ಯವಾಗಿ ಪ್ಲಾಸ್ಟಿಕ್ ನಿಷೇಧಕ್ಕಾಗಿ ಗ್ರೀನ್ ಚೆಕ್ ಪೋಸ್ಟ್‌ಗಳ ಸ್ಥಾಪನೆ, ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವ ನಿಯಮಗಳು ಮತ್ತು ಪಶ್ಚಿಮಘಟ್ಟ ಮ್ಯೂಸಿಯಂ ಇನ್ಸ್‌ಟಿಟ್ಯೂಟ್ ಆರಂಭಕ್ಕೆ ಪ್ರಸ್ತವಾನೆ ಸಲ್ಲಿಸಲಾಗಿದೆ ಎಂದು ಮೊಹಮ್ಮದ್ ತಬ್ರೇಝ್ ಆಲಂ ಶರೀಫ್ ತಿಳಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಯುವಜನರಲ್ಲಿ ಅರಿವು ಮೂಡಿಸುವುದು, ನಿಯಮಗಳ ರಚನೆ ಹಾಗೂ ಕತ್ತಲೆ ಕಾಡು ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಕತ್ತಲೆ ಕಾನನ್ನು ಹೆರಿಟೇಜ್ ಸೈಟ್ ಎಂದು ಘೋಷಿಸುವಂತೆ ಜೀವ ವೈವಿಧ್ಯ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಲು ಪೋಸ್ಟ್ ಕಾರ್ಡ್ ಬಿಡುಗಡೆಗೊಳಿಸಲಾಗಿದೆ. ಇತ್ತೀಚಿಗೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹೋಂ ಸ್ಟೇ, ರೆಸಾರ್ಟ್ ಸ್ಥಾಪನೆ ಕುರಿತು ದತ್ತಾಂಶ ಸಂಗ್ರಹಿಸಿ, ಅಲ್ಲಿ ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಮಾರ್ಗಸೂಚಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಜೀವವೈವಿಧ್ಯ ಉಳಿವಿಗೆ ಸೂಕ್ಷ್ಮ ಪ್ರದೇಶಗಳನ್ನು ಘೋಷಿಸುವ ಉದ್ದೇಶ ಹೊಂದಿದ್ದು ಸುಸ್ಥಿರ ಪ್ರವಾಸೋದ್ಯಮ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಪ್ರವಾಸೋದ್ಯಮ, ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
"

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಆದರೆ ಪಶ್ಚಿಮ ಘಟ್ಟಗಳಿಗೆ ಹಾನಿ ಉಂಟು ಮಾಡುವ ಯಾವುದೇ ಯೋಜನೆ ಜಾರಿಗೊಳಿಸುವ ಮೊದಲು ಯೋಚಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net