ಆನ್‌ಲೈನ್‌ನಲ್ಲಿ ಔಷಧ ಮಾರಾಟ ಅಸುರಕ್ಷಿತ | drug dealers Protest
ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದನ್ನು ವಿರೋಧಿಸಿ ಸೊರಬ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಪುರಂದರ ಅವರಿಗೆ ಮನವಿ ಸಲ್ಲಿಸಿದರು. ಈರೇಶ್ ಗೌಡ, ಸತೀಶ್, ಅನಂತ ಪದ್ಮನಾಭ, ಎಂ.ಜೆ.ಗಿರೀಶ್ ಇತರರಿದ್ದರು.
ಸೊರಬ: ಔಷಧಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದನ್ನು ವಿರೋಧಿಸಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ಔಷಧ ಅಂಗಡಿಗಳನ್ನು ಬಂದ್ ಮಾಡಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಔಷಧಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಎಂಬುದನ್ನು ಸರ್ಕಾರ ಅರಿಯಬೇಕಿದೆ. ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಯಾವುದೇ ಸ್ಪಷ್ಟ ನಿಯಮ ಇರದಿದ್ದರೂ ಹಲವು ಆನ್‌ಲೈನ್ ಕಂಪನಿಗಳು ಹಲವಾರು ವರ್ಷಗಳಿಂದ ಔಷಧ ಮಾರಾಟ ಮಾಡುತ್ತಲೇ ಬರುತ್ತಿವೆ ಎಂದು ದೂರಿದರು.
ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಔಷಧಗಳು ದೊರೆಯಲಿ ಎಂಬ ಉದ್ದೇಶದಿಂದ ಜನೌಷಧ ಕೇಂದ್ರ ತೆರೆದರೆ ಕೆಲವರು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬೇರೆ ಔಷಧ ಮಳಿಗೆಗಳ ವಿರೋಧವಿದೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅಕ್ರಮ ಇ-ಫಾರ್ಮಸಿಗಳನ್ನು ಮುಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಪ್ಪು ಪಟ್ಟಿ ಧರಿಸಿಕೊಂಡು ಶ್ರೀ ರಂಗನಾಥ ದೇವಸ್ಥಾನದಿಂದ ಮೌನ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಕೆ.ಪುರಂದರ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಸಿ.ಪಿ.ಈರೇಶ್ ಗೌಡ, ಗೌರವಾಧ್ಯಕ್ಷ ಸತೀಶ್, ಉಪಾಧ್ಯಕ್ಷ ಅನಂತ ಪದ್ಮನಾಭ, ಕಾರ್ಯದರ್ಶಿ ಎಂ.ಜೆ.ಗಿರೀಶ್, ಪುಟ್ಟರಾಜ ಗೌಡ, ವಿಶ್ವನಾಥ ಕಾಳೆ, ಪಂಚಾಕ್ಷರಿ, ಅಕ್ಷಯ್‌ಕುಮಾರ್, ಮಹೇಶ್‌ಕುಮಾರ್, ನಟರಾಜ ಶಿಂಧೆ, ಭೀಮೇಶ್, ಸಂದೀಪ್ ಪಾಟೀಲ್, ನಾಗರಾಜ ಗೌಡ ಇತರರಿದ್ದರು.