ಶಾಲಾ ವಾಹನಗಳಿಂದ ನಿಯಮ ಉಲ್ಲಂಘನೆ I rules violation

ಶಿವಮೊಗ್ಗ ತಾಲೂಕು ಖಾಸಗಿ ಅನುದಾನರಹಿತ ಶಾಲೆಗಳ ಮುಖ್ಯಸ್ಥರು ಮತ್ತು ಮುಖ್ಯಶಿಕ್ಷಕರಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಮಂಜುನಾಥ್ ಉದ್ಘಾಟಿಸಿದರು. ರಮೇಶ್, ದೇವರಾಜ್, ಮುರುಗೇಂದ್ರಪ್ಪ, ಮಲ್ಲೇಶಪ್ಪ ಇದ್ದರು.
ಶಿವಮೊಗ್ಗ ತಾಲೂಕು ಖಾಸಗಿ ಅನುದಾನರಹಿತ ಶಾಲೆಗಳ ಮುಖ್ಯಸ್ಥರು ಮತ್ತು ಮುಖ್ಯಶಿಕ್ಷಕರಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರವನ್ನು ಮಂಜುನಾಥ್ ಉದ್ಘಾಟಿಸಿದರು. ರಮೇಶ್, ದೇವರಾಜ್, ಮುರುಗೇಂದ್ರಪ್ಪ, ಮಲ್ಲೇಶಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಫ್‌ಸಿ ಮಾಡಿಸದೆ ಸಂಚಾರ
  • ಕೆಲ ವಾಹನಗಳಲ್ಲಿಲ್ಲ ಸಿಸಿ ಕ್ಯಾಮರಾ, ಜಿಪಿಎಸ್
  • ಕಾರ್ಯಾಗಾರದಲ್ಲಿ ಆಘಾತಕಾರಿ ಅಂಶ ಬಹಿರಂಗ
ಶಿವಮೊಗ್ಗ: ಶಾಲಾ ವಾಹನ (vehicle) ಗಳಲ್ಲಿ ಸಂಚರಿಸುವ ನಮ್ಮ ಮಕ್ಕಳು (children) ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಏಕೆಂದರೆ ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳ 83 ವಾಹನಗಳಿಗೆ ಎಫ್‌ಸಿ (ಕ್ಷಮತೆ (fitness) ಯ ಪ್ರಮಾಣ ಪತ್ರ) ಇಲ್ಲ!.
ಪ್ರತಿಷ್ಠಿತ ಎನಿಸಿಕೊಂಡಿರುವ, ಸಾವಿರಾರು ರೂ. ದುಬಾರಿ ಡೊನೇಷನ್ ಪಡೆಯುವ ಶಿಕ್ಷಣ ಸಂಸ್ಥೆಗಳು ಕೂಡ ಹಲವು ವಾಹನಗಳಿಗೆ ಎಫ್‌ಸಿ ಮಾಡಿಸಿಲ್ಲ. 20-30 ಬಸ್ ಹೊಂದಿರುವ ಕೆಲ ಶಿಕ್ಷಣ ಸಂಸ್ಥೆಗಳು ಎಫ್‌ಸಿ ಮಾಡಿಸುವುದನ್ನೇ ಮರೆತಿವೆ. ಎಲ್‌ಕೆಜಿ, ಇಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಕೆಲ ವಾಹನಗಳಿಗೂ ಎಫ್‌ಸಿ ಇಲ್ಲ ಎನ್ನುವುದು ವಿಪರ್ಯಾಸ.
ಶಿವಮೊಗ್ಗ ತಾಲೂಕಿನ ಎಲ್ಲ ಅನುದಾನರಹಿತ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿ ಪ್ರಮುಖರಿಗೆ ಶುಕ್ರವಾರ ರಸ್ತೆ, ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ ಕುರಿತು ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅನೇಕ ಆಘಾತಕಾರಿ ಅಂಶಗಳು ಹೊರಬಿದ್ದಿವೆ.
ಶಾಲಾ ವಾಹನಗಳಲ್ಲಿ ಸುರಕ್ಷತೆ ಎಂಬುದು ಸಂಪೂರ್ಣ ಮರೆಯಾಗಿದೆ. ವಾಹನಗಳಲ್ಲಿ ಸಿಸಿ ಕ್ಯಾಮರಾಗಳಿಲ್ಲ, ಜಿಪಿಎಸ್ ಅಳವಡಿಕೆಯಾಗಿಲ್ಲ. ಕೆಲ ವಾಹನಗಳ ಎಫ್‌ಸಿ 2012ರಲ್ಲೇ ಮುಕ್ತಾಯವಾಗಿದೆ. ಎಫ್‌ಸಿ ನವೀಕರಣಕ್ಕೂ ಶಾಲಾ ಆಡಳಿತ ಮಂಡಳಿ ಮುಂದಾಗಿಲ್ಲ. ಅದನ್ನು ಜಪ್ತಿ ಮಾಡಬೇಕಾದ ಆರ್‌ಟಿಒ ಅಧಿಕಾರಿಗಳು ಜಾಣ ಕುರುಡು ಅನುಸರಿಸುತ್ತಿದ್ದಾರೆ ಎಂಬುದು ದುರದೃಷ್ಟಕರ.
ಶಾಲಾ ವಾಹನಗಳು ಪಾಲಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಸಂಚಾರಿ ವೃತ್ತ ನಿರೀಕ್ಷಕ ದೇವರಾಜ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಮಲ್ಲೇಶಪ್ಪ ಸಭೆಗೆ ವಿವರಿಸಿದರು. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಬಗ್ಗೆ ಮಾಹಿತಿ ನೀಡಿದರು.
ಡಿಡಿಪಿಐ ಮಂಜುನಾಥ್, ಬಿಇಒ ರಮೇಶ್ ಮುಂತಾದವರಿದ್ದರು. ಸಂಚಾರ ನಿಯಮಗಳ ಕುರಿತು ಕೆಲವು ಸರಳ ಪ್ರಶ್ನೆಗಳನ್ನು ಕೇಳಿ, ಸರಿ ಉತ್ತರ ನೀಡಿದವರಿಗೆ ಪುಸ್ತಕವನ್ನು ಕೊಡುಗೆಯಾಗಿ ನೀಡಲಾಯಿತು.
ಶೀಘ್ರದಲ್ಲೇ ಕಾರ್ಯಾಚರಣೆ
ಎಫ್‌ಸಿ ಅವಧಿ ಮುಗಿದಿರುವ ಬಸ್‌ಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಲಾಗುವುದು. ಕೂಡಲೇ ಆ ಸಂಸ್ಥೆಗಳು ಎಫ್‌ಸಿ ನವೀಕರಣ ಮಾಡಿಸಿಕೊಳ್ಳಬೇಕು. ಇನ್ನು 10-15 ದಿನಗಳಲ್ಲಿ ಆರ್‌ಟಿಒ ಅಧಿಕಾರಿಗಳೊಂದಿಗೆ ಸೇರಿ ಜಂಟಿ ತಪಾಸಣೆ ನಡೆಸಿ ಎಫ್‌ಸಿ ಇಲ್ಲದ ಬಸ್‌ಗಳ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ದೇವರಾಜ್ ಎಚ್ಚರಿಸಿದರು. ಇತ್ತೀಚೆಗೆ ಶಾಲಾ ವಾಹನಗಳ ಚಾಲಕರ ತಪಾಸಣಾ ನಡೆಸಿದ ಸಂದರ್ಭದಲ್ಲಿ ನಾಲ್ವರು ಚಾಲಕರು ಮದ್ಯ ಸೇವಿಸಿದ್ದರು ಎಂಬುದು ದೃಢಪಟ್ಟಿದೆ. ಇನ್ಮುಂದೆ ಇಂತಹ ಪ್ರಕರಣಗಳು ಕಂಡು ಬಂದರೆ ಚಾಲಕರ ಬದಲು ಶಾಲಾ ಆಡಳಿತ ಮಂಡಳಿ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಒಬ್ಬರೂ ಲೈಸೆನ್ಸ್ ಮಾಡಿಸಿಲ್ಲ
ಶಾಲಾ ವಾಹನಗಳ ಕಂಡಕ್ಟರ್ ಲೈಸೆನ್ಸ್ ಪಡೆದಿರಬೇಕೆಂದು ನಿಯಮವೇ ಇದೆ. ಆದರೆ ನಮ್ಮ ಜಿಲ್ಲೆಯಲ್ಲಿ ಒಬ್ಬರೂ ಲೈಸೆನ್ಸ್ ಪಡೆದಿಲ್ಲ. ಇನ್ನೊಂದೆಡೆ ಶಾಲಾ ಬಸ್‌ಗಳ ನಿರ್ವಹಣೆಯೂ ಸಮರ್ಪಕವಾಗಿಲ್ಲ. ವಾಹನಗಳ ಗಾಜು ಹಾಗೂ ಟೈರ್‌ಗಳನ್ನು ನಿಗದಿತ ಸಮಯಕ್ಕೆ ಪರಿಶೀಲನೆ ನಡೆಸಬೇಕು. ಪ್ರತಿ ವಿದ್ಯಾರ್ಥಿಗಳಿಗೂ ಸೀಟ್ ಬೆಲ್ಟ್ ಅಳವಡಿಸಬೇಕು. ಶಾಲಾ ಬ್ಯಾಗ್‌ಗಳನ್ನು ಇರಿಸಲು ಬ್ಯಾಗ್ ಕ್ಯಾರಿಯರ್‌ಗಳು ಕಡ್ಡಾಯ ಎಂದು ಮಲ್ಲೇಶಪ್ಪ ವಿವರಿಸಿದರು.


ಪ್ರವೇಶಾತಿ ಬಳಿಕ ಎಚ್ಚರಿಕೆ

ಈಗಾಗಲೇ ಬಹುತೇಕ ಖಾಸಗಿ ಶಾಲೆಗಳಲ್ಲಿ ಪ್ರವೇಶಾತಿ ಮುಕ್ತಾಯವಾಗಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಪಾಲಕರಿಂದ ಡೊನೇಷನ್ ಪಡೆದಿದ್ದೂ ಆಗಿದೆ. ಈಗ ಡಿಡಿಪಿಐ ಡೊನೇಷನ್ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ. ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಡಿಡಿಪಿಐ ಮಂಜುನಾಥ್, ಖಾಸಗಿ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಒಮ್ಮೆ ಮಾತ್ರ ಡೊನೇಷನ್ ಪಡೆಯಲು ಅವಕಾಶ ಇದೆ. ಅದನ್ನು ಮೀರಿ ಡೊನೇಷನ್ ವಸೂಲಿ ಮಾಡಿದರೆ ಶಾಲೆ ಮಾನ್ಯತೆ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು. ಈವರೆಗೆ ಎಷ್ಟು ಶಾಲೆಗಳ ಮಾನ್ಯತೆಯನ್ನು ಡೊನೇಷನ್ ಸಂಗ್ರಹಕ್ಕೆ ರದ್ದು ಮಾಡಲಾಗಿದೆ ಎಂಬ ಅಂಶವನ್ನು ಮಾತ್ರ ವಿವರಿಸಲಿಲ್ಲ. ಖಾಸಗಿ ಶಾಲೆಗಳು ಹೆಚ್ಚು ಶುಲ್ಕ ವಸೂಲಿ ಮತ್ತು ಡೊನೇಷನ್ ವಸೂಲಿ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಶುಲ್ಕ ಪಡೆಯಲೂ ಇರುವ ನಿಯಮ ಪಾಲಿಸಬೇಕು. ಶುಲ್ಕದ ಮಾಹಿತಿಯನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ವಿದ್ಯಾರ್ಥಿ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಪತ್ರ ನೀಡುವುದು, ಅಂಕಪಟ್ಟಿ ನೀಡದೇ ಇರುವುದು ಸರಿಯಲ್ಲ ಎಂದರು.


ಅನಗತ್ಯ ಶುಲ್ಕ ಹೇರಿಕೆ ಸಲ್ಲ

ಎಲ್ಲ ಶಾಲೆಗಳ ಆಡಿಟ್ ವರದಿಗಳಲ್ಲಿ ತಕರಾರು ಕಂಡುಬರುತ್ತಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು. ಖಾಸಗಿ ಶಾಲೆಗಳು ಶುಲ್ಕ ನಿಗದಿ ಮಾಡುವ ಮೊದಲು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೇತನ, ಶಾಲಾ ನಿರ್ವಹಣಾ ಖರ್ಚಿನ ಲೆಕ್ಕ ಹಾಕಬೇಕು. ವೇತನವನ್ನು ಬ್ಯಾಂಕ್ ಮೂಲಕ ಪಾವತಿ ಮಾಡಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಸಿಬ್ಬಂದಿ ವೇತನದ ಶೇ. 70, ನಗರಸಭೆ ವ್ಯಾಪ್ತಿಯಲ್ಲಿ ಶೇ. 80 ಹಾಗೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವೇತನದ ಶೇ. 90 ರಷ್ಟು ಮಾತ್ರ ನಿರ್ವಹಣಾ ವೆಚ್ಚ ಇರಬೇಕು. ಶಾಲಾ ಸಮವಸ್ತ್ರ, ಶೂ, ಊಟ ಮೊದಲಾದವನ್ನು ಪಡೆಯಲು ಪಾಲಕರು ಒಪ್ಪಿದರೆ ಮಾತ್ರ ನೀಡಬೇಕು. ಇದನ್ನು ಹೊರತುಪಡಿಸಿ ಬೇರೆ ಶುಲ್ಕ ಪಡೆಯಲು ಅವಕಾಶ ಇಲ್ಲ. ಟ್ಯೂಷನ್ ಫೀ ಎಂದು ಒಟ್ಟು ಮೊತ್ತದ ಶೇ. 10ರಷ್ಟನ್ನು ಒಂದು ವರ್ಷ ಮಾತ್ರ ಪಡೆಯಲು ಅವಕಾಶವಿದೆ ಎಂದು ರಮೇಶ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net