ನಿವೃತ್ತ ಪೊಲೀಸ್ ಪೇದೆಯಿಂದ ಶಾಲಾ ಕಟ್ಟಡ ನಿರ್ಮಾಣ

ಭದ್ರಾವತಿ ಹಿರಿಯೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡ.
ಭದ್ರಾವತಿ ಹಿರಿಯೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶಾಲಾ ಕಟ್ಟಡ.
Published on
ಭದ್ರಾವತಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ರಾಜ್ಯದ ವಿವಿಧೆಡೆ ದಾನಿಗಳು ಸಹಾಯಹಸ್ತ ಚಾಚುತ್ತಿದ್ದಾರೆ. ಪೊಲೀಸ್ ಇಲಾಖೆಯ ನಿವೃತ್ತ ಸಿಬ್ಬಂದಿಯೊಬ್ಬರು ಭದ್ರಾವತಿಯಲ್ಲಿ ಸರ್ಕಾರಿ ಶಾಲೆಗೆ ಕಟ್ಟಡ ನಿರ್ಮಿಸಿಕೊಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದ ನಿವಾಸಿ, ಕೆಎಸ್‌ಆರ್‌ಪಿ ನಿವೃತ್ತ ಪೇದೆ ಎಸ್.ರಂಗನಾಥ್ ಸರ್ಕಾರಿ ಶಾಲೆ ಅಭಿವೃದ್ಧಿಗೆ ನೆರವಾಗಿದ್ದಾರೆ. ನಿವೃತ್ತ ಪೇದೆ ಎಸ್.ರಂಗನಾಥ್ ಹಾಗೂ ಆರ್.ನಾಗರತ್ನಾ ದಂಪತಿ ವೈಯಕ್ತಿಕವಾಗಿ 25ಲಕ್ಷ ರೂ. ಖರ್ಚು ಮಾಡಿ ಶಾಲಾ ಕಟ್ಟಡ ನಿರ್ಮಿಸುತ್ತಿದ್ದಾರೆ.
ಹಿರಿಯೂರು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 36*25 ಅಳತೆ ಜಾಗದಲ್ಲಿ 15 ಚದರಡಿಯ 2 ಆರ್‌ಸಿಸಿ ಕಟ್ಟಡಗಳನ್ನು ನಿರ್ಮಿಸಿ ಮಾದರಿಯಾಗಿದ್ದಾರೆ. ಕಾಮಗಾರಿ ಈಗಾಗಲೇ ಪೂರ್ಣಗೊಳ್ಳುವ ಹಂತ ತಲುಪಿದ್ದು, 2026ರ ಜ.23ರಂದು ಉದ್ಘಾಟನೆಗೊಳ್ಳಲಿದೆ. ಶಾಸಕ ಬಿ.ಕೆ.ಸಂಗಮೇಶ್ವರ್ ಚಾಲನೆ ನೀಡಲಿದ್ದಾರೆ.
ಪೇದೆ ರಂಗನಾಥ್ ಕೆಲಸದಿಂದ ನಿವೃತ್ತಿ ಹೊಂದಿದ ಮೇಲೆ ದುಡಿಮೆ ಹಣದಲ್ಲಿ ಸ್ವಲ್ಪ ಭಾಗವನ್ನು ಉತ್ತಮ ಕಾರ್ಯಕ್ಕೆ ಬಳಸಬೇಕು. ಆ ಕಾರ್ಯ ಶಾಶ್ವತವಾಗಿ ಉಳಿಯಬೇಕು ಎಂದು ನಿರ್ಧಾರ ಕೈಗೊಂಡಿದ್ದಾರೆ. ಇವರ ಪ್ರಯತ್ನಕ್ಕೆ ಪತ್ನಿ ನಾಗರತ್ನಾ ಕೂಡ ಬೆಂಬಲಿಸಿದ್ದಾರೆ. ಇಂತಹ ಪ್ರಯತ್ನದ ಲವಾಗಿ ಸರ್ಕಾರಿ ಶಾಲೆ ನೂತನ ಕಟ್ಟಡ ರೂಪುಗೊಂಡಿದೆ. ಉಳಿಸಿದ ಹಣವನ್ನು ತನ್ನ ಊರಿಗೆ ಉಪಕಾರ ಮಾಡಲು ನಿರ್ಧರಿಸಿ ಶಾಲೆ ಕಟ್ಟಡ ಕಟ್ಟಿಸಿದ್ದು, ದಂಪತಿ ಸೇವಾಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
7ನೇ ತರಗತಿಗೆ ಕಟ್ಟಡ ಬಳಕೆ
ಪ್ರಸ್ತುತ 72 ವರ್ಷ ವಯಸ್ಸಿನ ರಂಗನಾಥ್ ಅವರು ಬಾಲ್ಯದಲ್ಲಿ ಹಿರಿಯೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಆದ್ದರಿಂದ ತಾನು ಕಟ್ಟಿಸಿರುವ ಕೊಠಡಿ ಮೊದಲ ಮಹಡಿಯನ್ನು 7ನೇ ತರಗತಿ ವಿದ್ಯಾರ್ಥಿಗಳ ಅನುಕೂಲಕ್ಕೆ ಬಳಸಬೇಕು. ನೆಲಮಹಡಿಯಲ್ಲಿ ಮಕ್ಕಳ ಕಂಪ್ಯೂಟರ್ ಶಿಕ್ಷಣಕ್ಕೆ ಒದಗಿಸಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಶಾಲಾಭಿವೃದ್ಧಿ ಮಂಡಳಿ, ಶಿಕ್ಷಕರು ಒಪ್ಪಿಗೆ ಸೂಚಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅನುಮತಿ ಕೂಡ ದೊರೆತಿದೆ. ಕಟ್ಟಡ ಕಟ್ಟಿಸಿರುವ ಜತೆಯಲ್ಲಿ ಶಾಲಾ ಕೊಠಡಿಗಳ ಸ್ವಚ್ಛತೆ, ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಊರು ಬಿಟ್ಟವರಿಗೆ ಕರೆ ತಂದಿದ್ದು ಎಳನೀರು
ರಂಗನಾಥ್ ತಾನು ಜನಿಸಿದ ಹಿರಿಯೂರು ಗ್ರಾಮ ತೊರೆದು ಬೆಂಗಳೂರಿನತ್ತ ಮುಖ ಮಾಡಿ 48 ವರ್ಷ ಕಳೆದಿತ್ತು. ಸಂಬಂಧಿ ಮದುವೆ ನಿಮಿತ್ತ ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಭದ್ರಾವತಿ ಗೆಳೆಯರೊಬ್ಬರ ಮನೆಗೆ ಆಗಮಿಸಿ ಹಿಂದಿರುಗುವಾಗ ರಸ್ತೆ ಬದಿಯಲ್ಲಿ ಎಳನೀರು ಮಾರುವ ವ್ಯಕ್ತಿಯೊಬ್ಬ ಇವರನ್ನು ಕಂಡು ಮಾತನಾಡಿಸಿದ್ದರು. ಇದು ನಿಮ್ಮ ಮನೆ ಮರದ ಎಳನೀರು, ತುಂಬಾ ಚೆನ್ನಾಗಿ ಕಾಯಿಬಿಟ್ಟಿದೆ ಎಂದಿದ್ದಾನೆ. ಆತನ ಮಾತು ಕೇಳಿ ರಂಗನಾಥ್ ಅವರಿಗೆ ಮನೆ ನೆನಪು ಕಾಡಿದೆ. ಆಗ ಹಿರಿಯೂರಿನ ಕಡೆಗೆ ಧಾವಿಸಿದ್ದಾರೆ. ನಂತರ ಕುಟುಂಬವನ್ನು ಕರೆತಂದು ಮತ್ತೆ ಹಿರಿಯೂರಿನಲ್ಲಿ ನೆಲೆಸಿದ್ದಾರೆ. 2018ರಲ್ಲಿ ತಮ್ಮದೆ ನಿವೇಶನದಲ್ಲಿ ಸಣ್ಣ ಮನೆ ಕಟ್ಟಿಕೊಂಡಿರುವ ಅವರು, ಊರಿನಲ್ಲಿ ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕೆಂದು ಸರ್ಕಾರಿ ಶಾಲೆ ಆವರಣದಲ್ಲೇ ನೂತನ ಆರ್‌ಸಿಸಿ ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಸೋರುವ ಸರ್ಕಾರಿ ಶಾಲೆಗಳನ್ನು ರಿಪೇರಿ ಮಾಡಿಸುವುದೆ ಕಷ್ಟಕರ ದಿನಗಳಲ್ಲಿ ಶಾಲೆಯಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿ ಎಸ್.ರಂಗನಾಥ್ ಅವರು ಸ್ವಂತ ಹಣದಲ್ಲಿ 2 ಆರ್‌ಸಿಸಿ ಕಟ್ಟಡ ಕಟ್ಟಿಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅವರ ಅಪೇಕ್ಷೆಯಂತೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಕಂಪ್ಯೂಟರ್ ಕಲಿಕೆಗೆ ಕಟ್ಟಡ ಬಳಸಲಾಗುವುದು.
ಗೌರಮ್ಮ,ಮುಖ್ಯಶಿಕ್ಷಕಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿರಿಯೂರು
ಹಿರಿಯೂರಿನ ನಿವೃತ್ತ ಪೇದೆಯೊಬ್ಬರು ಶಾಲಾ ಕಟ್ಟಡ ಕಟ್ಟಿಸುತ್ತಿರುವುದು ಅದ್ಭುತ ಕೆಲಸ. ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನು ಅವರೇ ಮಾಡುತ್ತಿರುವುದು ಹೆಮ್ಮೆಯ ವಿಚಾರ.
ಕೋಡ್ಲು ಯಜ್ಞಯ್ಯ, ಭದ್ರಾವತಿ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ
ನಿವೃತ್ತಿ ವಯಸ್ಸಿನಲ್ಲಿ ಊರೂರು ಸುತ್ತಿದರೆ ಮನಸ್ಸು ಲವಲವಿಕೆಯಿಂದ, ನೆಮ್ಮದಿಯಾಗಿ ಇರಬಹುದು ಅಷ್ಟೆ. ಹೆಸರು ಚಿರಸ್ಥಾಯಿಯಾಗಿ ಗ್ರಾಮದಲ್ಲಿ ಉಳಿಯಬೇಕೆಂಬ ನಿಟ್ಟಿನಲ್ಲಿ ಶಾಲಾ ಕಟ್ಟಡ ನಿರ್ಮಿಸಿಕೊಡಲು ಮುಂದಾಗಿದ್ದೇನೆ. ಪತ್ನಿ, ಪುತ್ರಿ, ಸಂಬಂಧಿ ಒತ್ತಾಸೆಯೂ ಇದೆ. ಕುಟುಂಬದವರ ಸಲಹೆಯಿಂದ ಶಾಲೆ ಕಟ್ಟಲು ಸಾಧ್ಯವಾಗಿದೆ.
ಎಸ್.ರಂಗನಾಥ್, ಶಾಲಾ ಕಟ್ಟಡದ ದಾನಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net