ಫೆಬ್ರವರಿಯಲ್ಲಿ ಹತ್ಯೆಯಾಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ
ಸಂಕೇತ್ ಫೋಟೋ ಒಡೆದುಹಾಕಿದ ಕಿಡಿಗೇಡಿಗಳು
ತುಂಗಾನಗರ ಠಾಣೆಯಲ್ಲಿ ಪಾಲಕರಿಂದ ದೂರು
ಶಿವಮೊಗ್ಗ: ಒಂದು ತಿಂಗಳ ಹಿಂದೆ ಜಗಳ ಬಿಡಿಸಲು ಹೋಗಿ ಸಹಪಾಠಿಗಳಿಂದಲೇ ಹತ್ಯೆಯಾಗಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ, ಸೂಳೇಬೈಲ್‌ನ ಸಂಕೇತ್ ಸಮಾಧಿ(Sanket Samadhi)ಗೆ ಮಂಗಳವಾರ ಸಂಜೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.
ಫೆ.24ರಂದು ಸಂಕೇತ್ ಹತ್ಯೆ(Murder)ಯಾಗಿತ್ತು. ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿ(Cemetery)ಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಪಾಲಕರು ಪ್ರತಿದಿನ ಬೆಳಗ್ಗೆ ರುದ್ರಭೂಮಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಮಂಗಳವಾರ ಸಂಜೆ ಸಮಾಧಿಯ ಒಂದು ಭಾಗಕ್ಕೆ ಹಾನಿಯಾಗಿದ್ದು, ದುಷ್ಕರ್ಮಿಗಳು ಸಂಕೇತ್ ಸಮಾಧಿ ನಾಶಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಆತನ ತಂದೆ ಶಿವಕುಮಾರ್ ತುಂಗಾನಗರ ಠಾಣೆ(Tunganagara station)ಗೆ ದೂರು ನೀಡಿದ್ದಾರೆ.
ಸಂಕೇತ್ ಸಮಾಧಿಗೆ ಕಟ್ಟೆ ನಿರ್ಮಿಸಿ ಫೋಟೋ ಅಳವಡಿಸಲಾಗಿತ್ತು. ಆದರೆ ಫೋಟೋವನ್ನು ಬೀಳಿಸಿ ಪುಡಿ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಕಣ್ಣೀರು ಹಾಕಿದ ತಂದೆ ಶಿವಕುಮಾರ್
ಸಂಕೇತ್ ಸಮಾಧಿಗೆ ಫೋಟೋ ಅಳವಡಿಸಲಾಗಿತ್ತು. ಅದನ್ನು ಕಲ್ಲಿನಿಂದ ಜಜ್ಜಿದ್ದಾರೆ. ಹಿಂದೆ ಹಾಕಿದ್ದ ಗ್ರಾನೈಟ್ ಒಡೆದುಹಾಕಿದ್ದಾರೆ. ಬದುಕಿದ್ದಾಗಲೂ ನೆಮ್ಮದಿಯಿಂದ ಇರಲು ಬಿಡಲಿಲ್ಲ, ಈಗಲೂ ನಾವೂ ನೆಮ್ಮದಿಯಂದ ಇರುವುದಕ್ಕೆ ಬಿಡುತ್ತಿಲ್ಲ. ಸಂಕೇತ್ ಸಾವಿನ ಬಳಿಕ ಮನೆಯಲ್ಲಿ ನೆಮ್ಮದಿ ಇಲ್ಲದಾಗಿದೆ ಎಂದು ಆತನ ತಂದೆ ಶಿವಕುಮಾರ್ ಕಣ್ಣಿರು ಹಾಕಿದರು. ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಮಾ.26ರಂದು ಸಮಾಧಿಗೆ ಕಟ್ಟೆ ನಿರ್ಮಿಸಲಾಗಿತ್ತು. ಗ್ರಾನೈಟ್ ಕಲ್ಲು ಹಾಕಿಸಿ ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಿದ್ದರು. ಹಿಂಬದಿಯಲ್ಲಿ ಸಂಕೇತ್ ಫೋಟೋ ಇರಿಸಲಾಗಿತ್ತು ಎಂದರು.
"
ಈಗಾಗಲೇ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಎರಡು ತಂಡ ರಚನೆ ಮಾಡಿ ತನಿಖೆಗೆ ಆದೇಶಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುವುದು.