ವನ ಸೇರಿದ ಸಾಗರದ ಶ್ರೀ ಮಾರಿಕಾಂಬೆ

ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ದೇವಿಯನ್ನು ವನಕ್ಕೆ ಬಿಡುವ ಶಾಸ್ತ್ರದ ಮೆರವಣಿಗೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಕೆ.ಎನ್.ನಾಗೇಂದ್ರ ಮತ್ತಿತರರು ಇದ್ದರು.
ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ದೇವಿಯನ್ನು ವನಕ್ಕೆ ಬಿಡುವ ಶಾಸ್ತ್ರದ ಮೆರವಣಿಗೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಕೆ.ಎನ್.ನಾಗೇಂದ್ರ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಂಬತ್ತು ದಿನಗಳ ಕಾಲ ಲಕ್ಷಾಂತರ ಜನರಿಂದ ದೇವಿ ದರ್ಶನ
  • ಕೋಳಿ ಹಿಡಿಯಲು ಜನರ ಸಾಹಸ
  • ಜಾತ್ರೋತ್ಸವಕ್ಕೆ ವೈಭವದ ತೆರೆ
  • ದೇವಿಯ ಅದ್ದೂರಿ ಮೆರವಣಿಗೆ
ಸಾಗರ: ಒಂಬತ್ತು ದಿನದ ಸಾಗರ ಶ್ರೀ ಮಾರಿಕಾಂಬಾ ಜಾತ್ರೆ ಯಶಸ್ವಿಯಾಗಿದ್ದು, ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತ್ರದ ಮೂಲಕ ಜಾತ್ರೆ ಸಂಪನ್ನಗೊಂಡಿದೆ. ಒಂಬತ್ತು ದಿನಗಳಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ದೇವರ ದರ್ಶನ ಮಾಡಿದ್ದಾರೆ.
ಅಮ್ಮನವರನ್ನು ವನಕ್ಕೆ ಬಿಡುವ ಶಾಸ್ತದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಅಮ್ಮನ ಸೇವೆ ಮಾಡಲು ಸಾಗರ ಜನತೆ ಅವಕಾಶ ಕಲ್ಪಿಸಿದ್ದರು. ಜನರ ಸಹಕಾರದಿಂದ ಜಾತ್ರೆ ಯಶಸ್ವಿಯಾಗಿದೆ. ಇಡೀ ಸಮಿತಿ ಹಗಲಿರುಗಳೂ ಶ್ರಮಿಸಿದ್ದು, ಅವರ ಶ್ರಮ ಅಪಾರ ಎಂದು ತಿಳಿಸಿದರು.
ಅಮ್ಮನವರನ್ನು ವನಕ್ಕೆ ಬಿಡುವ ಸಂದರ್ಭದಲ್ಲಿ ಅಮ್ಮನವರ ಪಕ್ಕ ನಿಂತು ಮೈಕ್ ಹಿಡಿದು ಜನರು ಮುಂದಕ್ಕೆ ಸಾಗುವಂತೆ ಸೂಚನೆ ನೀಡುತ್ತಿದ್ದರು. ಎಲ್ಲ ವೃತ್ತಗಳಲ್ಲೂ ತಾಯಿಗೆ ಪೂಜೆ ಮಾಡಿಸುವ ಭಕ್ತರಿಗೆ ಸಮಯವಕಾಶ ಮಾಡಿಕೊಡುತ್ತಿದ್ದರು. ವನಕ್ಕೆ ಬಿಡುವ ಸಂದರ್ಭದಲ್ಲಿ ದೇವಿ ಮೇಲೆ ಹಾರಿಬಿಟ್ಟ ಕೋಳಿಯನ್ನು ಹಿಡಿಯಲು ಭಕ್ತರು ಹರಸಾಹಸ ಪಡುತ್ತಿದ್ದರು.
ಪೌರಕಾರ್ಮಿಕರಿಂದ ಸ್ವಚ್ಛತೆ
ಜಾತ್ರೆಯಲ್ಲಿ ಸಮಿತಿಯಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಪ್ರತಿ ದಿನ 10 ಸಾವಿರಕ್ಕೂ ಹೆಚ್ಚು ಜನರು ಊಟ ಮಾಡಿದ್ದಾರೆ. ಪ್ರತಿ ದಿನ ಹಬ್ಬದ ಊಟದ ಮಾದರಿ ಊಟ ನೀಡಲಾಯಿತು. ನಗರಸಭೆಯಿಂದ ಕುಡಿಯುವ ನೀರು, ಶುಚಿತ್ವಕ್ಕೆ ಕ್ರಮ ವಹಿಸಲಾಗಿತ್ತು. ಪ್ರತಿ ದಿನ 55 ಟನ್ ಕಸ ಸಂಗ್ರಹಣೆಯಾಗುತ್ತಿತ್ತು. ಬೆಳಗ್ಗೆ 2ರಿಂದಲೇ ಪೌರನೌಕರರು ಉತ್ತಮ ಕೆಲಸ ಮಾಡಿದರು. ಪೌರಾಯುಕ್ತ ಎಚ್.ಕೆ.ನಾಗಪ್ಪ, ಪರಿಸರ ಇಂಜಿನಿಯರ್ ಮದನ್ ನಿರ್ವಹಿಸಿದರು.
ನಾಟಕ ನೋಡಲು ಪ್ರಚಾರ: ಅಧಿಕೃತವಾಗಿ ಜಾತ್ರೆ 9 ದಿನ ನಡೆದು ಸಂಪನ್ನಗೊಂಡರೂ ವಸ್ತು ಪ್ರದರ್ಶನ ಮತ್ತು ಇತರ ಚಟುವಟಿಕೆಗಳು ಇನ್ನೂ ಒಂದು ವಾರ ಇರಲಿದೆ. ಈ ಹಿನ್ನೆಲೆಯಲ್ಲಿ ಸಾಗರಕ್ಕೆ ಆಗಮಿಸಿರುವ ಗದಗ ಜಿಲ್ಲೆಯ ಶ್ರೀಶೈಲ ಮಲ್ಲಿಕಾರ್ಜುನ ನಾಟಕ ಸಂಘ ಪ್ರದರ್ಶನ ನೀಡುತ್ತಿರುವ ನಾಟಕ ಗಂಡನಿಗೆ ತಕ್ಕ ಹೆಂಡತಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಸಾಗರದ ಪುರೋಹಿತ, ಗಣಪತಿ ಬ್ಯಾಂಕ್ ನಿರ್ದೇಶಕ ಎಸ್.ಗಜಾನನ ಜೋಯ್ಸ ತಾವೇ ಒಂದು ಕರಪತ್ರ ಹೊರಡಿಸಿ ಜಾತ್ರೆಯಲ್ಲಿ ಜನತೆಗೆ ನಾಟಕ ನೋಡುವಂತೆ ಕೋರುತ್ತಿದ್ದಾರೆ.
ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ ಸಿಂಗ್, ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕೋಶಾಧ್ಯಕ್ಷ ನಾಗೇಂದ್ರ ಕುಮಟ, ಉಪವಿಭಾಗಾಧಿಕಾರಿ ವಿರೇಶ್‌ಕುಮಾರ್, ಎಎಸ್‌ಪಿ ಡಾ. ಬೆನಕಪ್ರಸಾದ್, ವಿವಿಧ ಸಮಿತಿ ಸಂಚಾಲಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net