ಮೃತ ಕಾರ್ಮಿಕರಿಗೆ ತಲಾ ರೂ. 5 ಲಕ್ಷ ಪರಿಹಾರ | land sliding

ಹುಲಿಕಲ್ ಘಾಟ್‌ನ ದುರಂತ ನಡೆದ ಸ್ಥಳದಲ್ಲಿ ಮಣ್ಣು ಕುಸಿದಿರುವುದು.
ಹುಲಿಕಲ್ ಘಾಟ್‌ನ ದುರಂತ ನಡೆದ ಸ್ಥಳದಲ್ಲಿ ಮಣ್ಣು ಕುಸಿದಿರುವುದು.
Published on
ಹೊಸನಗರ: ಹುಲಿಕಲ್ ಘಾಟ್‌ನ ಮಾರ್ಗ ದುರಸ್ತಿ ವೇಳೆ ಮೇಲಿಂದ ಮಣ್ಣು ಕುಸಿದು ಮೃತಪಟ್ಟ ಮೂವರಿಗೆ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಹೇಳಿದರು.
ಶುಕ್ರವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ನಗರ ಸಂಯುಕ್ತ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಅವಘಡದ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಿಎಂ ಗಮನಕ್ಕೆ ತಂದಿದ್ದರು. ಅದರನ್ವಯ ಮುಖ್ಯಮಂತ್ರಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರ ಭರಿಸಲಿದೆ ಎಂದರು.
ಗುಡ್ಡ ಕುಸಿತದಲ್ಲಿ ಮೂವರು ಮಣ್ಣಿನಡಿ ಸಿಲುಕಿದ್ದು, ಇಬ್ಬರ ಶವವನ್ನು ರಾತ್ರಿ 11 ಗಂಟೆಗೆ ಹೊರತೆಗೆಯಲಾಗಿತ್ತು. ಒಂದು ಶವ ತುಂಬ ಕೆಳಗೆ ಮಣ್ಣಿನೊಳಗೆ ಹೂತುಹೋಗಿದ್ದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿತು. ಬೆಳಗಿನ ಜಾವ 4 ಗಂಟೆಗೆ ಶವ ಹೊರತೆಗೆಯಲಾಯಿತು.
ಮೃತರ ಶವಗಳನ್ನು ನಗರ ಆಸ್ಪತ್ರೆಯ ಶವಾಗಾರದಲ್ಲಿಟ್ಟಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮೃತರ ಕುಟುಂಬದವರ ರೋದನ ಮುಗಿಲುಮುಟ್ಟಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಕುಟುಂಬದವರಿಗೆ ನೀಡಲಾಯಿತು. ಕಾಮಗಾರಿ ಮೇಲ್ವಿಚಾರಕ ರಾಘವೇಂದ್ರ ಚಕ್ಕಾರು ಅಂತ್ಯಕ್ರಿಯೆ ಚಕ್ಕಾರು ಗ್ರಾಮದಲ್ಲಿ ನೆರವೇರಿತು. ಹಾವೇರಿ ಜಿಲ್ಲೆ ನಿಲೋಗಲ್ಲು ಗ್ರಾಮದ ರಾಜು ಮತ್ತು ಶಬ್ಬೀರ್ ಶವಗಳನ್ನು ಹಾವೇರಿಗೆ ಕಳುಹಿಸಿಕೊಡಲಾಯಿತು.
ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.

ವಿಜಯವಾಣಿಯಲ್ಲಿ ವರದಿ ಪ್ರಕಟ

ಘಾಟ್ ಮಾರ್ಗದ ಹೇರ್‌ಪಿನ್ ಕ್ರಾಸ್‌ನಿಂದ ಕೆಳಭಾಗದ 50ರಿಂದ 60 ಅಡಿ ದೂರದಲ್ಲಿ ಕಾಂಕ್ರೀಟ್ ರಸ್ತೆಯ ಕೆಳಭಾಗ ಕೊರೆದು ಕುಸಿಯುತ್ತಿದೆ. ಮರಗಳು ಇರುವ ಕಾರಣ ಮಣ್ಣು ಹಿಡಿದಿಟ್ಟುಕೊಂಡಿದೆ ಎಂಬ ಬಗ್ಗೆ ವಿಜಯವಾಣಿಯಲ್ಲಿ ಈ ಹಿಂದೆಯೇ ವರದಿ ಪ್ರಕಟವಾಗಿತ್ತು. ಈಗ ದುರಂತ ನಡೆದಿರುವುದು ಕೂಡಾ ಅದೇ ಸ್ಥಳದಲ್ಲಿ. ಮರಗಳ ಸಮೇತ ಮಣ್ಣು ಕುಸಿದಿದೆ.

ಕಾಮಗಾರಿ ಮುಂದುವರಿಸಿ

ಘಾಟ್ ರಸ್ತೆ ಒಳಭಾಗದಿಂದ ಸಂಪೂರ್ಣ ಕುಸಿದಿದೆ. ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಇದು ಕರಾವಳಿ ಮತ್ತು ಮಧ್ಯಕರ್ನಾಟಕ ಭಾಗದ ಸಂಪರ್ಕಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ಕಾಮಗಾರಿಯನ್ನು ಕೂಡಲೇ ಮುಂದುವರಿಸಿ ಮೇ  ತಿಂಗಳ ಅಂತ್ಯದೊಳಗೆ ಮುಗಿಸುವಂತೆ ಜನಪ್ರತಿನಿಧಿಗಳು ಸೇರಿ ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net